ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್‌ಗಳಿಗೆ ಪರವಾನಿಗೆ ಕಡ್ಡಾಯ: ಡಿಸಿ ಸ್ವರೂಪ ಟಿ.ಕೆ

ಉಡುಪಿ, ಜ.27: ಜಿಲ್ಲೆಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಎಲ್ಲಾ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದೇ ಕಡಲಿಗೆ ಇಳಿಯಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಷ್ಟ ಪಡಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕಡಲ ತೀರದಲ್ಲಿ ತೆಗೆದುಕೊಳ್ಳಬೇಕಾದ ಭದ್ರತೆ ಕುರಿತು ಚರ್ಚಿಸಲು ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಕಡಲಿನ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು, ಪ್ರಯಾಣದ ಅನುಭವ ಪಡೆ ಯಲು ಪ್ರವಾಸಿ ಬೋಟ್‌ಗಳ ಮೊರೆ ಹೋಗುತ್ತಾರೆ. ಆದ್ದರಿಂದ ಇಂಥ ಬೋಟುಗಳು ಸಂಬಂಧಿತ ಎಲ್ಲಾ ಇಲಾಖೆ ಗಳಿಂದ ಅಗತ್ಯ ಪರವಾನಿಗೆ ಪಡೆದೇ ಕಾರ್ಯಾಚರಿಸಬೇಕು ಎಂದು ಅವರು ಹೇಳಿದ್ದಾರೆ.
ಜಿಲ್ಲೆಯ ಕಡಲ ತೀರ ಸೇರಿದಂತೆ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದರು.
ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸುವ ಪ್ರವಾಸಿ ಬೋಟ್ ಮಾಲಕರ ಸಭೆಯನ್ನು ಶೀಘ್ರದಲ್ಲಿ ಕರೆದು ಪರವಾನಿಗೆ ಪಡೆಯುವಂತೆ ಸೂಚನೆ ನೀಡಬೇಕು ಎಂದ ಸ್ವರೂಪ ಟಿ.ಕೆ., ಜಿಲ್ಲೆಯ ಪ್ರವಾಸಿ ಬೋಟ್‌ಗಳ ಮಾಲಕರು ಹಾಗೂ ಅದನ್ನು ಚಲಾಯಿಸುವವರಿಗೆ ಕಾರ್ಯಾಗಾರವನ್ನು ಆಯೋಜಿಸಿ, ಸುರಕ್ಷತಾ ವಿಧಾನ ಅನುಸರಿಸುವ ಬಗ್ಗೆ, ವಿಮೆ ಸೌಲಭ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಬೇಕು. ಜೀವ ರಕ್ಷಕ ಸಿಬ್ಬಂದಿಗಳೂ ಸಹ ಜೀವ ರಕ್ಷಣಾ ವಿಧಾನಗಳ ಬಗ್ಗೆ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ವಿವಿಧ ವಿಷಯಗಳ ಕುರಿತು ಎಚ್ಚರಿಸುವ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂಧ್ಯ ಎನ್.ಎಂ ಮತ್ತಿತರರು ಉಪಸ್ಥಿತರಿದ್ದರು.
ಪ್ರವಾಸಿ ಬೋಟ್ ನೋಂದಣಿ ಮಾಡಿಕೊಳ್ಳಿ
ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ 45 ದಿನಗಳ ಒಳಗೆ ಕಡ್ಡಾಯ ವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡು ಅನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೇ ಇರುವ ಪ್ರವಾಸಿ ಬೋಟ್‌ಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ. ಅನುಮತಿ ಪಡೆದ ಪ್ರವಾಸಿ ಬೋಟ್ ಗಳು ಸಹ ಪ್ರತೀ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ಪಷ್ಟಪಡಿಸಿದರು.
ಬೋಟ್‌ಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯಗೊಳಿಸಿ
ಪ್ರವಾಸಿ ಬೋಟ್‌ಗಳಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಲೈಫ್ ಜಾಕೆಟ್ ಧರಿಸುವುದನ್ನು ಗಂಭೀರವಾಗಿ ಪರಿಗಣಿಸ ಬೇಕು. ಪ್ರತಿಯೊಬ್ಬ ಪ್ರವಾಸಿಗರು ಕಡಲಿಗೆ ಇಳಿಯುವ ಮುನ್ನ ಲೈಫ್‌ಜಾಕೆಟ್ ಧರಿಸುವಂತೆ ನೋಡಿಕೊಳ್ಳಬೇಕು. ಲೈಫ್ ಜಾಕೆಟ್ ಬಳಸುವ ಕುರಿತು ಕರಪತ್ರಗಳನ್ನು ಸಮುದ್ರ ತೀರ ಸೇರಿದಂತೆ ಪ್ರವಾಸಿಗರು ಹೆಚ್ಚಾಗಿ ಸೇರುವಲ್ಲಿ ಪ್ರದರ್ಶಿಸಬೇಕು. ಪ್ರವಾಸಿ ಬೋಟ್‌ಗಳಲ್ಲಿ ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದಲ್ಲಿ ಮಾತ್ರ ಬೋಟ್ ಮುಂದೆ ಸಾಗಲಿದೆ ಎಂಬ ಪ್ರೀ-ರೆಕಾರ್ಡೆಡ್ ಆಡಿಯೋವನ್ನು ಬೋಟ್‌ಗಳಲ್ಲಿ ಅಳವಡಿಸಿ ಪ್ರಸಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.







