ಉಡುಪಿ ವಕೀಲರ ಸಂಘದ ಚುನಾವಣೆಗೆ ತಡೆ ಕೋರಿದ ಅರ್ಜಿ ಹೈಕೋರ್ಟ್ನಲ್ಲಿ ವಜಾ

ಸಾಂದರ್ಭಿಕ ಚಿತ್ರ
ಉಡುಪಿ: ನವೆಂಬರ್ 21ರಂದು ನಡೆಯಬೇಕಾಗಿದ್ದ ಉಡುಪಿ ವಕೀಲರ ಸಂಘದ ಚುನಾವಣೆಯನ್ನು ಮುಂದೂಡಲು ಎದುರಾಳಿ ಬಣ ನಡೆಸಿದ ಪ್ರಯತ್ನಕ್ಕೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಹಿನ್ನಡೆಯುಂಟಾಗಿದ್ದು, ಚುನಾವಣೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ಉಡುಪಿ ವಕೀಲರ ಸಂಘದ ಹಾಲಿ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ನೇರವಾಗಿ ಹಾಗೂ ನ್ಯಾಯಯುತವಾಗಿ ಚುನಾವಣೆಯನ್ನು ಎದುರಿಸ ಲಾಗದೇ, ಸೋಲಿನ ಭಯದಿಂದ ಹತಾಶರಾಗಿ ನಿಯಮಾವಳಿಯಂತೆ ಹಾಗೂ ಪಾರದರ್ಶಕವಾಗಿ ನಡೆಸಲಾಗುತ್ತಿರುವ ಚುನಾವಣೆಗೆ ಕ್ಷುಲ್ಲಕ ಕಾರಣಗಳನ್ನು ಒಡ್ಡಿ ಮುಂದೂಡುವಂತೆ ಎಚ್.ರತ್ನಾಕರ್ ಶೆಟ್ಟಿ, ಸಂಜಯ್ ಕೆ.ನೀಲಾವರ ಹಾಗೂ ವಾಣಿ ವಿ. ರಾವ್ ಮೂಲಕ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಪೀಠವು, ರಿಟ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲವೆಂದು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿಯ ಬೆರಳೆಣಿಕೆಯ ಕೆಲವು ಸಮಯಸಾಧಕ ವಕೀಲರು ತಮ್ಮ ಸ್ವಾರ್ಥ ಸಾಧನೆಗಾಗಿ ವಕೀಲರ ಸಂಘವನ್ನು ಇಬ್ಭಾಗಗೊಳಿಸಲು ಸಂಘಕ್ಕೆ ಸಮಾನಾಂತರವಾಗಿ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. ಇದೀಗ ಇಂದಿನ ಬೆಳವಣಿಗೆಯಿಂದ ಈ ಸಮಯಸಾಧಕ ತಂಡಕ್ಕೆ ತೀವ್ರ ಮುಖಭಂಗವಾಗಿದೆ. ಮುಂಬರುವ ಚುನಾವಣೆಯಲ್ಲಿ ಸದಸ್ಯರು ಇವರಿಗೆ ತಕ್ಕ ಪಾಠ ಕಲಿಸಿ ಸಂಘದ ಘನತೆ ಹಾಗೂ ಪ್ರತಿಷ್ಠೆಯಲ್ಲಿ ಎತ್ತಿಹಿಡಿಯುಂತೆ ರೆನೋಲ್ಡ್ ಪ್ರವೀಣ್ ಕುಮಾರ್ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.





