ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಉದ್ಘಾಟನೆ

ಉಡುಪಿ: ನಗರದ ನೇತ್ರಜ್ಯೋತಿ ಕಾಲೇಜಿನಲ್ಲಿ ಫಿಸಿಯೋಥೆರಪಿ ಕ್ಲಿನಿಕ್ ಅನ್ನು ಮಣಿಪಾಲ ಕಾಲೇಜು ಆಫ್ ಹೆಲ್ತ್ ಸೈನ್ಸ್‌ನ ಡೀನ್ ಡಾ. ಅರುಣ್ ಮಯ್ಯ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಬದುಕಿನ ಎಲ್ಲಾ ಹಂತಗಳಲ್ಲೂ ಫಿಸಿಯೋಥೆರಪಿ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಆರೋಗ್ಯ ಪೂರ್ಣ ಬದುಕಿಗೆ ಇದು ಅತ್ಯಗತ್ಯ. ನೇತ್ರ ಜ್ಯೋತಿ ಕಾಲೇಜಿನಲ್ಲಿ ಪ್ರಾರಂಭ ವಾದ ಸುಸಜ್ಜಿತ ಫಿಸಿಯೋಥೆರಪಿ ಕ್ಲಿನಿಕ್‌ನ ಪ್ರಯೋಜನವನ್ನು ಎಲ್ಲರು ಪಡೆಯುವಂತಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಜ್ವಲ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಪುರುಷೋತ್ತಮ ಶೆಟ್ಟಿ ಮಾತನಾಡಿ, ಭವಿಷ್ಯದಲ್ಲಿ ನೇತ್ರ ಜ್ಯೋತಿ ಕಾಲೇಜು ಶ್ರೇಷ್ಠ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿ ದರು. ಮತ್ತೊಬ್ಬ ಅತಿಥಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಅವರು ಸಂಸ್ಥೆಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ನೇತ್ರಜ್ಯೋತಿ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಕೃಷ್ಣಪ್ರಸಾದ್ ಕೂಡ್ಲು ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪರಿಪೂರ್ಣತೆ ಪಡೆಯಲು ಅರೆ ವೈದ್ಯಕೀಯ ಸಿಬ್ಬಂದಿಗಳ ಪಾತ್ರ ಬಹಳ ಮುಖ್ಯ ಎಂದರು.
ನೇತ್ರ ಜ್ಯೋತಿ ಕಾಲೇಜಿನ ಅಧ್ಯಕ್ಷೆ ರಶ್ಮಿ ಕೃಷ್ಣಪ್ರಸಾದ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ. ಗೌರಿ ಪ್ರಭು ನೇತ್ರಜ್ಯೋತಿ ಫಿಸಿಯೋಥೆರಪಿ ಕ್ಲಿನಿಕ್‌ನಲ್ಲಿ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರು.
ವೇದಿಕೆಯಲ್ಲಿ ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ಟ್ರಸ್ಟಿ ರಘುರಾಮ್ ರಾವ್ ಉಪಸ್ಥಿತರಿದ್ದರು. ಕಾಲೇಜಿನ ಸಂಚಾಲಕ ಮಾಧವ ಪೂಜಾರಿ ಸ್ವಾಗತಿಸಿ ಉಪನ್ಯಾಸಕಿ ಶ್ರಾವ್ಯ ವಂದಿಸಿದರು. ಉಪನ್ಯಾಸಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.






