ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಮಂಗಳವಾರ ಸ್ಪಷ್ಟ ಚಿತ್ರಣ

ಹೆಲಿಪ್ಯಾಡ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಉಡುಪಿ ಡಿಸಿ
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ವಿಶೇಷ ಆಹ್ವಾನದ ಮೇಲೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನ.28ರಂದು ನಡೆಯುವ ಲಕ್ಷಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಳ್ಳಲು ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸುವ ಕುರಿತು ಸ್ಪಷ್ಟ ಚಿತ್ರಣ ಮಂಗಳವಾರ ಸಿಗಲಿದೆ.
ಪಧಾನ ಮಂತ್ರಿಗಳ ಭೇಟಿಯ ಭದ್ರತೆಯ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ವಿಶೇಷ ಭದ್ರತಾ ಪಡೆಯ (ಎಸ್ಪಿಜಿ) ಹಿರಿಯ ಅಧಿಕಾರಿಗಳು ನಾಳೆ ಉಡುಪಿಗೆ ಆಗಮಿಸಲಿದ್ದು, ಶ್ರೀಕೃಷ್ಣ ಮಠವೂ ಸೇರಿದಂತೆ ಪ್ರಧಾನಿ ಭೇಟಿ ನೀಡುವ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ಕೈಗೊಳ್ಳಬೇಕಾದ ಭದ್ರತಾ ವ್ಯವಸ್ಥೆಗಳ ಕುರಿತು ಪರಿಶೀಲಿಸಿದ ಬಳಿಕ ಜಿಲ್ಲಾಡಳಿತದೊಂದಿಗೆ ಸಭೆಯನ್ನು ನಡೆಸಲಿದ್ದು, ಇದರಲ್ಲಿ ಪ್ರಧಾನಿ ಭೇಟಿಯ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಎಸ್ಪಿಜಿಯ ಕೆಲವು ಕಿರಿಯ ಅಧಿಕಾರಿಗಳ ಇಂದು ಉಡುಪಿಗೆ ಆಗಮಿಸಿದ್ದರೆ, ಹಿರಿಯ ಅಧಿಕಾರಿಗಳು ನಾಳೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ವೇಳೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರನ್ನು ಮೋದಿ ಭೇಟಿಯ ಕುರಿತಂತೆ ಪ್ರಶ್ನಿಸಿದಾಗ, ನಾಳೆ ಎಸ್ಪಿಜಿಯ ಹಿರಿಯ ಅಧಿಕಾರಿಗಳೊಂದಿಗೆ ನಡೆಯುವ ಸಭೆಯ ಬಳಿಕ ಎಲ್ಲಾ ಮಾಹಿತಿಗಳನ್ನು ನೀಡುವುದಾಗಿ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಇದಕ್ಕೆ ಧ್ವನಿಗೂಡಿಸಿದರು.
ಸುಮಾರು ಮೂರು ದಶಕದ ಬಳಿಕ ದೇಶದ ಪ್ರಧಾನಮಂತ್ರಿಯೊಬ್ಬರು ಉಡುಪಿಗೆ ಭೇಟಿ ನೀಡುವ ಕುರಿತಂತೆ ಕಳೆದ ಒಂದು ವಾರದಿಂದ ಬಿರುಸಿನ ಸಿದ್ಧತೆ ಜಿಲ್ಲಾಡಳಿತ, ಪರ್ಯಾಯ ಪುತ್ತಿಗೆ ಮಠ ಹಾಗೂ ಬಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿದೆ.
ಸದ್ಯ ಸಿಕ್ಕಿರುವ ಮಾಹಿತಿಯಂತೆ ಪ್ರಧಾನಮಂತ್ರಿ ಅವರು ಮಂಗಳೂರಿಗೆ ವಿಶೇಷ ವಿಮಾನದಲ್ಲಿ ಬಂದು ಅಲ್ಲಿಂದ ಹೆಲಿಕಾಪ್ಟರ್ನಲ್ಲಿ ಆದಿಉಡುಪಿಯ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಇದಕ್ಕಾಗಿ ಆದಿಉಡುಪಿಯಲ್ಲಿ ಹೊಸದಾದ ಹೆಲಿಪ್ಯಾಡ್ನ ನಿರ್ಮಾಣ ಅಂತಿಮ ಹಂತದಲ್ಲಿದೆ. ಪ್ರಧಾನಮಂತ್ರಿ ಅವರು ಬಿಗುಭದ್ರತೆಯ ನಡುವೆ ಆದಿಉಡುಪಿಯಿಂದ ಕರಾವಳಿ ಬೈಪಾಸ್, ಬನ್ನಂಜೆ, ಕಲ್ಸಂಕ ಮಾರ್ಗವಾಗಿ ಅಪರಾಹ್ನ 12ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ.
ಮಠದಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನವೂ ಸೇರಿದಂತೆ ಕೆಲವು ನಿಗದಿತ ಕಾರ್ಯಕ್ರಮಗಳ ಬಳಿಕ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಜರ್ಮನ್ ತಂತ್ರಜ್ಞಾನದ ಬೃಹತ್ ವೇದಿಕೆಯಲ್ಲಿ ನಡೆಯುವ ಲಕ್ಷಕಂಠ ಗೀತಗಾಯನ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಅಪರಾಹ್ನ 1:45ರ ಸುಮಾರಿಗೆ ಪ್ರಧಾನಿಗಳು ಆದಿಉಡುಪಿಯಿಂದ ಹೆಲಿಕಾಪ್ಟರ್ನಲ್ಲಿ ಮಂಗಳೂರು ಮೂಲಕ ನಿಗದಿತ ಕಾರ್ಯಕ್ರಮಕ್ಕಾಗಿ ಗೋವಾದ ಕಾಣಕೋಣದ ಪರ್ತಗಾಳಿ ಮಠಕ್ಕೆ ತೆರಳಲಿದ್ದಾರೆ.
ಇದೀಗ ಉಡುಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಆದಿಉಡುಪಿಯಿಂದ ಕರಾವಳಿ ಬೈಪಾಸ್ವರೆಗೆ 169ಎ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಂಕ್ರೀಟೀಕರಣ ಕಾಮಗಾರಿಯನ್ನು ಅತ್ಯಂತ ವೇಗದಲ್ಲಿ ನಡೆಸಲಾಗುತ್ತಿದೆ. ಅದೇ ರೀತಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತಾ ಕಾರ್ಯಗಳು ಕರಾವಳಿ ಬೈಪಾಸ್ನಿಂದ ಕಲ್ಸಂಕ ಹಾಗೂ ಕೃಷ್ಣ ಮಠದ ಪರಿಸರದಲ್ಲಿ ಕೈಗೊಳ್ಳಲಾಗುತ್ತಿದೆ.
ನಗರಸಭೆಯ ಸ್ವಚ್ಛತಾ ಯಂತ್ರದ ಮೂಲಕ ರಸ್ತೆಯ ಇಕ್ಕೆಲ್ಲಗಳಲ್ಲಿ, ಮಠದ ಪಾರ್ಕಿಂಗ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯವನ್ನು ಕಾರ್ಮಿಕರು ನಡೆಸುತಿದ್ದಾರೆ. ಕೃಷ್ಣ ಮಠದ ಪರಿಸರವನ್ನು ಬಣ್ಣ ಬಣ್ಣದ ಹೂಗಳ ಗಿಡಗಳನ್ನು ಇರಿಸುವ ಮೂಲಕ ಸುಂದರಗೊಳಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಧಿಕಾರಿಗಳೊಂದಿಗೆ ಆದಿಉಡುಪಿಯ ಹೆಲಿಪ್ಯಾಡ್ಗೆ, ಮಠದ ಪಾರ್ಕಿಂಗ್ ಪ್ರದೇಶದ ಸಭೆಯ ನಡೆಯುವ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೆಂಡಾಲ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳಗಳ ಪರಿಶೀಲನೆ ನಡೆಸಿದರು. ಅಲ್ಲದೇ ಅವರು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶಾಸಕರು, ಪೊಲೀಸ್ ವರಿಷ್ಠಾಧಿಕಾರಿ ಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಪ್ರಧಾನಿ ಭೇಟಿಗೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತಂತೆ ಚರ್ಚಿಸಿದರು.
ಈಗಾಗಲೇ ಕರಾವಳಿ ಬೈಪಾಸ್ನಿಂದ ಕಲ್ಸಂಕದವರೆಗೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ತಡೆಗೋಡೆಗಳನ್ನು ಅಳವಡಿಸಲಾಗಿದೆ. ಹೆಲಿಪ್ಯಾಡ್ ನಿಂದ ಮಠದ ಪಾರ್ಕಿಂಗ್ ಪ್ರದೇಶದವರೆಗಿನ 1.8ಕಿ.ಮೀ. ಉದ್ದದ ರಸ್ತೆಯಲ್ಲಿ ಒಂದೆರಡು ಕಡೆಗಳಲ್ಲಿ ಮಾತ್ರ ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ನಿಲ್ಲಲು ಅವಕಾಶ ನೀಡುವ ಸಾದ್ಯತೆ ಇದೆ. ಹೆಲಿಪ್ಯಾಡ್ ಎದುರಿನ ಎಪಿಎಂಸಿಯಲ್ಲಿ ನಡೆಯುವ ಸಂತೆಯನ್ನು ಮೂರು ದಿನಗಳ ಕಾಲ (ನ.26ರಿಂದ 28ರವರೆಗೆ) ಕಲ್ಯಾಣಪುರಕ್ಕೆ ಸ್ಥಳಾಂತರಿಸಲಾಗಿದೆ.
ನ.28ರಂದು ಶಾಲೆಗಳಿಗೆ ರಜೆ ಘೋಷಿಸಲು ಮನವಿ
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಯೋಜಿಸಿ ರುವ ಬೃಹತ್ ಗೀತೋತ್ಸವದ ಅಂಗವಾಗಿ ನ.28ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಅಂದು ಸ್ಥಳೀಯ ರಜೆ ಘೋಷಣೆ ಮಾಡುವಂತೆ ಉಡುಪಿ ಜಿಲ್ಲಾಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.
ದೇಶದ ಪ್ರಧಾನಿಯೋರ್ವರು ಸರಿಸುಮಾರು ಮೂರು ದಶಕಗಳ ಬಳಿಕ (ಚುನಾವಣಾ ಪ್ರಚಾರವನ್ನು ಹೊರತುಪಡಿಸಿ) ಉಡುಪಿಗೆ ಭೇಟಿ ನೀಡುತ್ತಿರುವುದು ಜಿಲ್ಲೆಗೆ ಸಂಭ್ರಮದ ವಿಚಾರವಾಗಿದೆ. ಜಿಲ್ಲಾಡಳಿತ ಸ್ಥಳೀಯ ರಜೆ ನೀಡಿದಲ್ಲಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಭಾಗಿಯಾಗಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದ್ದಾರೆ
ಪ್ರಧಾನಮಂತ್ರಿಗಳ ಭೇಟಿ ಸಮಯದಲ್ಲಿ ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ವಾಹನಗಳ ಸಂಚಾರ ಮತ್ತು ಸಾರ್ವಜನಿಕ ಓಡಾಟದ ನಿರ್ಬಂಧವಿರುವ ಹಿನ್ನೆಲೆಯಲ್ಲಿ ನ.28ರ ಶುಕ್ರವಾರದಂದು ತುರ್ತು ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಅಂಗನವಾಡಿ, ಶಾಲಾ-ಕಾಲೇಜು ಹಾಗೂ ಸರಕಾರಿ ಕಛೇರಿಗಳೂ ಸೇರಿದಂತೆ ಜಿಲ್ಲಾದ್ಯಂತ ಒಂದು ದಿನದ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸಬೇಕೆಂದು ಯಶ್ಪಾಲ್ ಸುವರ್ಣ ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.







