ಉಡುಪಿ ನಗರ ವ್ಯಾಪ್ತಿಯಲ್ಲಿ ಕಳಪೆ ವಾಯು ಗುಣಮಟ್ಟ: ಕ್ರಮಕ್ಕೆ ಪರಿಸರ ಸಂಗಮದಿಂದ ನಗರಸಭಾ ಆಯುಕ್ತರಿಗೆ ಪತ್ರ

ಸಾಂದರ್ಭಿಕ ಚಿತ್ರ
ಉಡುಪಿ, ಎ.1: ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಉಡುಪಿ ನಗರ ವಾಯು ಗುಣಮಟ್ಟ ನಿಗದಿ ಪಡಿಸಿದ ಮಾಪನಕ್ಕಿಂತ (0-100), ಕಳಪೆ ಗುಣಮಟ್ಟ (160ರಿಂದ 180) ದಾಖಲಾಗುತ್ತಿರುವುದು ಅತ್ಯಂತ ಕಳವಳಕರ ವಿಷಯವಾಗಿದ್ದು, ಈ ಬಗ್ಗೆ ಕೂಡಲೇ ತುರ್ತುಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ‘ಪರಿಸರ ಸಂಗಮ’ ಸಂಘಟನೆ ನಾಡಿನ ಹಲವು ಗಣ್ಯರ ಸಹಿಯೊಂದಿಗೆ ಉಡುಪಿ ನಗರಸಭಾ ಆಯುಕ್ತರಿಗೆ ಪತ್ರ ಬರೆದು ಆಗ್ರಹಿಸಿದೆ.
ಬೆಂಗಳೂರು ಮೂಲದ ‘ಪರಿಸರ ಸಂಗಮ’ ಜೀವ ಸಂಕುಲ ಪರ ವೇದಿಕೆಯು ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ಜಲ ಸಂಪನ್ಮೂಲಗಳ ರಕ್ಷಣೆ, ಜೀವ ವೈವಿಧ್ಯತೆಗಳ ಉಳಿವಿಗೆ ಬದ್ಥತೆಯುಳ್ಳ, ಇದಕ್ಕಾಗಿ ಹೋರಾಟ ಮಾಡುತ್ತಿರುವ ರಾಜ್ಯಮಟ್ಟದ ವೇದಿಕೆಯಾಗಿದೆ.
ಉಡುಪಿ ನಗರದ ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣವೆಂದರೆ ಇದರಲ್ಲಿ ಮಾಲಿನ್ಯಕಾರಕ ಪಿಎಂ 2.5 (ಪರ್ಟಿಕ್ಯೂಲೇಟ್ ಮ್ಯಾಟರ್), ಪಿಎಂ10, ಕಾರ್ಬನ್ ಮೋನೋಕ್ಸೈಡ್ (ಸಿಒ- 348ಪಿಪಿಬಿ), ಸಲ್ಫರ್ ಡೈಆಕ್ಸೈಡ್ (ಎಸ್ಓ2- 2ಪಿಪಿಬಿ), ನೈಟ್ರೋಜನ್ ಡೈಆಕ್ಸೈಡ್ (ಎನ್ಓ2- 8ಪಿಪಿಬಿ) ಹಾಗೂ ಓರೆನ್ (ಓ3-26ಪಿಪಿಬಿ) ಕಣಗಳು ಅಧಿಕ ಸಂಖ್ಯೆಯಲ್ಲಿರುವುದೇ ಕಾರಣ ಎಂದು ಸಂಘಟನೆಯ ಸದಸ್ಯರಾಗಿರುವ ಉಡುಪಿಯ ಪರಿಸರ ಹೋರಾಟಗಾರ ಪ್ರೇಮಾನಂತ ಕಲ್ಮಾಡಿ ತಿಳಿಸಿದ್ದಾರೆ.
ಮಾಲಿನ್ಯದ ಅಂಶಗಳ ಪ್ರಕಾರ ಪಿಎಂ2.5, 2.5 ಮೈಕ್ರೋನ್ಗಿಂತ ಕಡಿಮೆ ವ್ಯಾಸದ ಕಣಗಳು ಇಲ್ಲಿನ ಗಾಳಿಯಲ್ಲಿ ಇರುವುದು ದಾಖಲಾಗಿದೆ. ಅತಿ ಸೂಕ್ಷ್ಮ ಆರೋಗ್ಯ ಸಮಸ್ಯೆ ಇರುವವರು ಹಾಗೂ ಅಶಕ್ತ ವೃದ್ಧರು ಶ್ವಾಸಕೋಶ ಸಂಬಂಧಿ ಅನಾರೋಗ್ಯಕ್ಕೆ ತುತ್ತಾಗುವ ಎಲ್ಲಾ ಸಾಧ್ಯತೆಗಳಿರುವುದರಿಂದ ಕನಿಷ್ಠ ಎನ್95 ಮಾಸ್ಕ್ ಬಳಸುವ ಪರಿಸ್ಥಿತಿ ಉಡುಪಿ ನಗರವಾಸಿಗಳಿಗೆ ಬಂದಿದೆ ಎಂದು ಮಾ.25ರಂದು ಬರೆದ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಇದು ಜನರ ಮೂಲಭೂತ ಹಕ್ಕುಗಳ ಜೊತೆಗೆ ನಾಗರಿಕರು ಉತ್ತಮ ಪರಿಸರವನ್ನು ಹೊಂದುವ ಹಕ್ಕಿಗೆ ಚ್ಯುತಿ ತಂದಿದೆ. ಆದ್ದರಿಂದ ನಗರಸಭೆಯು ಈ ಕುರಿತಂತೆ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಈ ನಿಟ್ಟಿನಲ್ಲಿ 2026-27ನೇ ಸಾಲಿನ ಬಜೆಟ್ನಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಆದ್ಯತೆ ಕೊಟ್ಟು ನಗರ ದಲ್ಲಿರುವ ಖಾಲಿ ಜಾಗದಲ್ಲಿ ಹಸಿರು ಬೆಳೆಸುವ, ಗಿಡಮರಗಳನ್ನು ಅದರಲ್ಲೂ ವಿಶೇಷವಾಗಿ ಬಿದಿರು ಗಿಡಗಳನ್ನು ಬೆಳೆಸುವ ಪ್ರಯತ್ನ ನಡೆಸುವಂತೆ ಸಲಹೆಯನ್ನು ನೀಡಲಾಗಿದೆ.
ಈ ಮೂಲಕ ‘ಹವಾಮಾನ ಬದಲಾವಣೆ ಮತ್ತು ತುರ್ತು ಪರಿಸರ ಕ್ರಿಯೆ’ ಪಾಲನೆಯೊಂದಿಗೆ ಉಡುಪಿ ಉತ್ತಮ ನಗರಸಭೆ ಎನ್ನುವ ಹಿರಿಮೆಯನ್ನು ಉಳಿಸಿಕೊಳ್ಳುವಂತಾಗಲಿ ಎಂದು ಪತ್ರದಲ್ಲಿ ಹಾರೈಸಲಾಗಿದೆ.
ಪತ್ರಕ್ಕೆ ಕಾರ್ಕಳದ ಮಮತಾ ರೈ, ಧಾರವಾಡದ ಪ್ರಕಾಶ್ ಭಟ್, ಮೈಸೂರಿನ ಸುರೇಶ್ ಕೆ.ಪಿ., ಮಂಗಳೂರಿನ ಸರೋಜಾ ಪ್ರಕಾಶ್, ಧಾರವಾಡದ ಶಾರದಾ ಗೋಪಾಲ, ಲೋಕೇಶ್ ಚಿಂತಾಮಣಿ, ಪ್ರೇಮಾನಂದ ಕಲ್ಮಾಡಿ, ಕಾಸರಗೋಡಿನ ರಾಜು ಕಿದೂರು, ಇನ್ನಾ ಚಂದ್ರಹಾಸ ಶೆಟ್ಟಿ ಸೇರಿದಂತೆ 40ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ.
ನಗರಸಭೆ ತುರ್ತುಕ್ರಮ ಕೈಗೊಳ್ಳಬೇಕಿದೆ: ಕಲ್ಮಾಡಿ
ಉಡುಪಿ ನಗರಸಭೆ ಕೆಲಸಮಯದ ಹಿಂದೆ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಕರೆದ ಬಜೆಟ್ ಪೂರ್ವ ಕರೆದ ಸಮಾಲೋಚನಾ ಸಭೆಯಲ್ಲಿ ತಾನು ಈ ಬಗ್ಗೆ ವಿಷಯ ಪ್ರಸ್ತಾಪ ಮಾಡಿ ಕೂಡಲೇ ತುರ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ವಾಯು ಮಾಲಿನ್ಯದ ಪರಿಣಾಮಗಳ ಕುರಿತು, ಇದರಿಂದ ಜನರ ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರ ಆರೋಗ್ಯದ ಮೇಲಾಗುವ ಪರಿಣಾಮಗಳ ಕುರಿತಂತೆ ಗಮನ ಸೆಳೆದಿದ್ದೆ ಎಂದು ಪರಿಸರ ಸಂಗಮ ಸಂಘಟನೆಯ ಸದಸ್ಯರಲ್ಲೊಬ್ಬರಾದ ಜಿಲ್ಲೆಯ ಪ್ರಮುಖ ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ತಿಳಿಸಿದರು.
ನಗರಸಭೆ ಈಗ ತುರ್ತಾಗಿ ಮಾಡಬೇಕಾಗಿರುವುದು ನಗರಸಭಾ ವ್ಯಾಪ್ತಿಯಲ್ಲಿರುವ, ತನಗೆ ಸೇರಿದ ಖಾಲಿ ನಿವೇಶನಗಳು ಹಾಗೂ ಕಟ್ಟಡಗಳ ಆವರಣವನ್ನು ಹಸಿರೀಕರಣಗೊಳಿಸುವುದು ಹಾಗೂ ಶ್ವಾಸಕೇಂದ್ರ (ಲಂಗ್ ಸ್ಪೇಸ್)ಗಳನ್ನು ಅಭಿವೃದ್ಧಿಪಡಿಸುವುದು. ಸಾಧ್ಯವಾದಲೆಲ್ಲಾ ಬಿದಿರು ತಳಿಗಳನ್ನು ಬೆಳೆಸುವುದರಿಂದ ವಾತಾವರಣ ದಿಂದ ಕಾರ್ಬನ್ ಡೈಆಕ್ಸೈಡ್ (ಸಿಓ2) ಅಂಶ ಕಡಿಮೆಯಾಗಿ, ಹೆಚ್ಚೆಚ್ಚು ಆಮ್ಲಜನಕ ಪ್ರಮಾಣ ಗಾಳಿಗೆ ಸೇರಲು ಸಾಧ್ಯವಾಗುತ್ತದೆ ಎಂದು ಕಲ್ಮಾಡಿ ಸೂಚಿಸಿದರು.






