ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣ | ಅತ್ಯಾಚಾರ ಸಂತ್ರಸ್ತೆಯ ಫೋಟೊ ಹಂಚಿದ ಸಾಮಾಜಿಕ ಜಾಲತಾಣದ 150 ಖಾತೆಗಳ ವಿರುದ್ಧ ಕ್ರಮ: ಎಸ್ಪಿ ಹರಿರಾಂ ಶಂಕರ್

ಪ್ರದೀಪ್ ಪೂಜಾರಿ - ಎಸ್ಪಿ ಹರಿರಾಂ ಶಂಕರ್
ಉಡುಪಿ, ನ.2: ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾನೂನು ಬಾಹಿರವಾಗಿ ಅತ್ಯಾಚಾರ ಸಂತ್ರಸ್ತೆಯ ಬಗ್ಗೆ ಅಪಪ್ರಚಾರ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮತ್ತು ಹಂಚಿಕೊಂಡಿರುವ 150 ಖಾತೆಗಳನ್ನು ಈಗಾಗಲೇ ಗುರುತಿಸಿದ್ದು, ಇದರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೋ, ಆಡಿಯೋ ರೆಕಾರ್ಡ್, ವೈಜ್ಞಾನಿಕ ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಮಾಹಿತಿ ನೀಡಿದ ಎಸ್ಪಿ, ಘಟನೆಯ ಸತ್ಯಾಂಶ ಗೊತ್ತಿಲ್ಲದೆ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಗಳಲ್ಲಿ ನೊಂದ ಮಹಿಳೆಯ ಬಗ್ಗೆ ಸಾಕಷ್ಟು ಅವಹೇಳನಕಾರಿ ಫೋಸ್ಟ್ಗಳನ್ನು ಮಾಡುತ್ತಿರುವುದು ದುಃಖಕರ ವಿಷಯವಾಗಿದೆ. ಆಕೆ ಮತ್ತು ಪ್ರದೀಪ್ ಪೂಜಾರಿಗೆ ಸಂಬಂಧಿಸಿದ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ತೆಜೋವಧೆ ಮಾಡಲಾಗುತ್ತಿದೆ. ಆ ಮೂಲಕ ಆಕೆಯ ಮಾನಸಿಕ ಸ್ಥಿತಿಯನ್ನು ಕುಗ್ಗಿಸ ಲಾಗುತ್ತಿದೆ. ಇದೆಲ್ಲವೂ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.
ಈ ರೀತಿ ನೊಂದ ಮಹಿಳೆಯರನ್ನೇ ಗುರಿಯಾಗಿಸುವುದರಿಂದ ಮುಂದೆ ಯಾವ ಮಹಿಳೆ ಕೂಡ ಇಂತಹ ಕೃತ್ಯಗಳು ನಡೆದಾಗ ಪೊಲೀಸ್ ಠಾಣೆಗೆ ದೂರು ನೀಡಲು ಬರಲ್ಲ. ಆದುದರಿಂದ ಈ ರೀತಿ ಸಾಮಾಜಿಕ ಜಾಲತಾಣ ಗಳಲ್ಲಿ ನೊಂದ ಮಹಿಳೆಯ ತೆಜೋವಧೆ ಮಾಡಿರುವ ಎಲ್ಲರ ವಿರುದ್ಧ ಕ್ರಮ ಜರಗಿಸಲಾಗುವುದು. ಪ್ರದೀಪ್ ಪೂಜಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದುಃಖಕರ. ಆದರೆ ಅವನಿಗೆ ನ್ಯಾಯ ಕೊಡುವ ಹೆಸರಿನಲ್ಲಿ ಸಂತ್ರಸ್ತೆಗೆ ಅನ್ಯಾಯ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಮೂರು ಪ್ರತ್ಯೇಕ ಪ್ರಕರಣಗಳು: 2020ರ ನ.10ರಂದು ಸಂತ್ರಸ್ತೆ ಯುವತಿ ಸ್ಕೂಟರ್ನಲ್ಲಿ ಹೋಗುತ್ತಿದ್ದ ವೇಳೆ ಪ್ರದೀಪ್ ಪೂಜಾರಿ ಕಾರಿನಲ್ಲಿ ಬಂದು ಅಡ್ಡಗಟ್ಟಿ, ತನ್ನನ್ನು ಮದುವೆ ಆಗಬೇಕು, ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಬಗ್ಗೆ ಸಂತ್ರಸ್ತೆ ಯುವತಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಆರೋಪಿ ಪ್ರದೀಪ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದರು.
ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಪ್ರದೀಪ್ ಪೂಜಾರಿ, 2025ರ ನ.29ರಂದು ಸಂತ್ರಸ್ತ ಮಹಿಳೆ, ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಕಾಡಿನೊಳಗೆ ಎಳೆದುಕೊಂಡು ಹೋಗಿ, ತಲೆ ಮೇಲೆ ಕಲ್ಲು ಹಾಕುವುದಾಗಿ ಬೆದರಿಸಿ, ಅತ್ಯಾಚಾರ ಎಸಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಯುವತಿ ದೂರು ಮಾತ್ರವಲ್ಲದೆ ವೈದ್ಯರ ಹೇಳಿಕೆ, ವೈಜ್ಞಾನಿಕ ಸಾಕ್ಷ್ಯದಿಂದ ಅತ್ಯಾಚಾರ ಎಸಗಿರುವುದು ದೃಢಪಟ್ಟಿದ್ದು, ಅದರಂತೆ ನ್ಯಾಯಾ ಲಯಕ್ಕೆ ಜಾರ್ಜ್ಶೀಟ್ ಸಲ್ಲಿಸಲಾಗಿದೆ.
ಮತ್ತೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ಪ್ರದೀಪ್ ಪೂಜಾರಿ, 2026ರ ಅ.28ರಂದು ರಾತ್ರಿ ಯುವತಿ ತನ್ನ ಮನೆಯಲ್ಲಿ ಸ್ನಾನ ಮಾಡಿ ಹೊರಗಡೆ ಬಂದಾಗ ಪ್ರದೀಪ್ ಪೂಜಾರಿ ಖಾರದ ಪುಡಿ, ಬಟ್ಟೆ ಇಟ್ಟು ಕೊಂಡು ಆಕೆಯ ಮೇಲೆ ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದನು. ಆಗ ತಡೆಯಲು ಬಂದ ಆಕೆಯ ತಾಯಿಯ ಕಣ್ಣಿಗೆ ಖಾರದ ಪುಡಿ ಎರಚಿದ್ದನು ಎಂದು ಈ ಮೂರು ಘಟನೆಗಳ ಬಗ್ಗೆ ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಪ್ರದೀಪ್ನನ್ನು ಅಪರಹಣ ಮಾಡಿಲ್ಲ: ಮೂರನೆ ಘಟನೆ ಸಂದರ್ಭ ಸಂತ್ರಸ್ತ ಯುವತಿ ಆಡಿಯೋ ರೆಕಾರ್ಡ್ ಮಾಡಿದ್ದು, ಅದರಲ್ಲಿ ಪ್ರದೀಪ್ ಪೂಜಾರಿ ಆಕೆಯನ್ನು ಕೊಲ್ಲಲು ಬಂದಿರುವುದಾಗಿ ತಿಳಿಸಿರುವುದು ಸ್ಪಷ್ಟವಾಗಿದೆ. ಅದೇ ರೀತಿ ಪೊಲೀಸರ ವಿಡಿಯೋ ರೆಕಾರ್ಡ್ನಲ್ಲಿಯೂ ಪ್ರದೀಪ್ ಇದೇ ಹೇಳಿಕೆ ನೀಡಿದ್ದಾನೆ ಎಂದು ಎಸ್ಪಿ ತಿಳಿಸಿದರು.
ಈ ಘಟನೆಯ ಬಗ್ಗೆ ಬೇರೆ ಬೇರೆ ವಿಚಾರಗಳು ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದ್ದು, ಆತನನ್ನು ಅಪರಹರಿಸಿ ಮನೆಗೆ ಕರೆದು ಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದ ವಿಚಾರ. ನಮ್ಮ ತನಿಖೆಯಲ್ಲಿ ಕಂಡುಬಂದಿಲ್ಲ. ಪ್ರದೀಪ್, ಸಂತ್ರಸ್ತೆ ಮನೆಗೆ ಬಂದಿರುವುದಕ್ಕೆ ಬೇಕಾದ ಎಲ್ಲ ಸಾಕ್ಷ್ಯಗಳು ಕೂಡ ನಮಗೆ ದೊರೆತಿದೆ. ಆತ ತಂದ ಬಟ್ಟೆ, ಖಾರದ ಪುಡಿ ಕೂಡ ಸಿಕ್ಕಿದೆ ಎಂದರು.
ಹಿರಿಯಡ್ಕ ಎಸ್ಸೈ ವಿರುದ್ಧ ಶಿಸ್ತು ಕ್ರಮ
ಪ್ರದೀಪ್ ಪೂಜಾರಿ ಮನೆಗೆ ಬಂದು ನೊಂದ ಯುವತಿಯ ಕೊಲೆಗೆ ಯತ್ನಿಸಿದಾಗ, ಆಕೆಯ ತಾಯಿ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದರು. ಆಗ ಸ್ಥಳಕ್ಕೆ ಬಂದ ಏಳರಿಂದ ಎಂಟು ಮಂದಿ ಪ್ರದೀಪ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದಾರೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪ್ರದೀಪ್ ಪೂಜಾರಿ ಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಬಗ್ಗೆ ಪ್ರದೀಪ್ ಪೂಜಾರಿ ದೂರು ನೀಡಿದರೂ ಹಿರಿಯಡ್ಕ ಎಸ್ಸೈ ನೇರವಾಗಿ ಎಫ್ಐಆರ್ ಪ್ರಕರಣ ದಾಖಲಿಸದೆ ದೂರು ಮಾತ್ರ ಸ್ವೀಕರಿಸಿ ದ್ದರು. ಈ ರೀತಿ ನೇರ ಎಫ್ಐಆರ್ ದಾಖಲಿಸದೆ ಕರ್ತವ್ಯ ಲೋಪ ಎಸಗಿದ ಹಿರಿಯಡ್ಕ ಎಸ್ಸೈ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಹಿತಿ ನೀಡಿದರು.
ಎಸ್ಸೈಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ, ಪಶ್ಚಿಮ ವಲಯ ಐಜಿಪಿ ಅವರಲ್ಲಿ ವರದಿ ಮಾಡುವಂತೆ ಆದೇಶ ನೀಡಲಾಗಿದೆ. ಎಸ್ಸೈ ವಿರುದ್ಧ ಹೆಚ್ಚುವರಿ ಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ವಿಚಾರಣೆಯಲ್ಲಿ ಮತ್ತೆ ಕರ್ತವ್ಯ ಲೋಪ ಕಂಡುಬಂದರೆ ಆ ಬಗ್ಗೆಯೂ ಹೆಚ್ಚುವರಿಯಾಗಿ ಶಿಸ್ತು ಕ್ರಮ ಜರಗಿಸಲಾಗುವುದು. ಅಲ್ಲದೆ ಅವರು ಇನ್ನು ಮುಂದೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಮುಂದುವರೆಸದಂತೆ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.
ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ
ಪ್ರದೀಪ್ ಪೂಜಾರಿಗೆ ಮೇಲೆ ಹಲ್ಲೆ ನಡೆಸಿರುವ ಮತ್ತು ಆತನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಸಂಬಂಧ ಎರಡು ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣದ ತನಿಖೆಯನ್ನು ಹಿರಿಯಡ್ಕ ಠಾಣೆಯ ಬದಲು ಮಣಿಪಾಲ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ನಡೆಸ ಲಾಗುತ್ತಿದೆ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.
ಈ ಪ್ರಕರಣದ ಆರೋಪಿಗಳ ಬಂಧನ ಈಗಾಗಲೇ ನಾಲ್ಕೈದು ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಗಿಸಲಾಗುವುದು. ಕಾನೂನು ಕೈಗೆ ತೆಗೆದುಕೊಳ್ಳಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ. ಅದಕ್ಕೆ ತಕ್ಕಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
‘ನೊಂದ ಮಹಿಳೆ ಅತ್ಯಾಚಾರ ಘಟನೆಯ ಬಳಿಕ ನಾಲ್ಕು ವಾರ ಮಾನಸಿಕವಾಗಿ ಸಮಾಲೋಚನೆ ಪಡೆದು ಅದರಿಂದ ಹೊರ ಬಂದಿದ್ದರು. ಬಳಿಕ ಇಲ್ಲಿ ಕೆಲಸ ಬಿಟ್ಟು ಬೇರೆ ಊರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೊನ್ನೆ ನಡೆದ ಘಟನೆ ದಿನದ ರಾತ್ರಿಯೇ ನೊಂದ ಯುವತಿ ವಾಪಾಸ್ಸು ಕರ್ತವ್ಯಕ್ಕಾಗಿ ಬೇರೆ ಊರಿಗೆ ಹೋಗಬೇಕಿತ್ತು. ಅದಕ್ಕಾಗಿ ಆಕೆ ಬಸ್ ಟಿಕೆಟ್ ಕೂಡ ಬುಕ್ ಮಾಡಿದ್ದರು. ಆಕೆ ಹೊರಡುವ 15 ನಿಮಿಷ ಮೊದಲು ಈ ಘಟನೆ ನಡೆದುಹೋಯಿತು’
-ಹರಿರಾಂ ಶಂಕರ್, ಎಸ್ಪಿ ಉಡುಪಿ






