ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಮರು ಸರ್ವೆಗೆ ಸಿದ್ಧತೆ: ಅಶೋಕ ಕುಮಾರ್ ಕೊಡವೂರು
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ

ಉಡುಪಿ, ಸೆ.25: ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಗಳಲ್ಲೊಂದಾದ ಗ್ಯಾರಂಟಿ ಯೋಜನೆಗಳ ಅರ್ಹ ಫಲಾನುಭವಿಗಳ ಮರು ಸರ್ವೆ ಕಾರ್ಯ ಕೈಗೊಂಡಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಗೃಹಲಕ್ಷ್ಮೀ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ನೈಜ ಫಲಾನುಭವಿಗಳನ್ನು ಗುರುತಿಸುವ ಸಲುವಾಗಿ ಪರಿಶೀಲನಾ ಕಾರ್ಯ ಕೈಗೊಳ್ಳುವಾಗ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸೂಕ್ತವಾಗಿ ಪರಿಶೀಲಿಸುವುದ ರೊಂದಿಗೆ ಯಾವುದೇ ಒಬ್ಬ ಅರ್ಹ ಫಲಾನುಭವಿ ಈ ಯೋಜನೆಗಳಿಂದ ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದವರು ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಗುರುತಿಸುವ ಪರಿಶೀಲನಾ ಕಾರ್ಯಕ್ಕಾಗಿ ಈಗಾಗಲೇ 1050 ಗಣತಿದಾರರನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಆ್ಯಪ್ ಮೂಲಕ ಸರ್ವೆ ಕೈಗೊಳ್ಳಲು ಗಣತಿದಾರರಿಗೆ ತರಬೇತಿ ನೀಡಿ, ಅವರು ಮನೆ ಮನೆ ಭೇಟಿ ಸಂದರ್ಭದಲ್ಲಿ ಫಲಾನುಭವಿಗಳ ಸೂಕ್ತ ಮಾಹಿತಿ ಗಳನ್ನು ಕಲೆಹಾಕಿ ಯಾವೊಬ್ಬ ಅರ್ಹರೂ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸೂಚನೆ ನೀಡಬೇಕೆಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಪಡಿತರ ಚೀಟಿದಾರರು ಇ-ಕೆವೈಸಿಯನ್ನು ತಪ್ಪದೇ ಮಾಡಿಸಬೇಕು. ಜಿಲ್ಲೆಯಲ್ಲಿ ಇದರ ಪ್ರಗತಿ ಕುಂಠಿತವಾಗಿದೆ. ಕೆಲವು ಪ್ರದೇಶಗಳಲ್ಲಿ ಸರ್ವರ್ ಸಮಸ್ಯೆಯಿಂದ ಪ್ರಗತಿ ಸಾಧಿಸಲಾ ಗುತ್ತಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದಕ್ಕೆ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಪ್ರತಿಶತಃ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದರು.
3.17 ಲಕ್ಷ ಸರ್ವೆ ಪೂರ್ಣ: ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 3,64,000 ಜನರು ನೋಂದಣಿಯಾಗಿದ್ದು, ಈಗಾಗಲೇ 3.17 ಲಕ್ಷ ಫಲಾನುಭವಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಪ್ರತಿಯೊಂದು ಮನೆಗೂ ಈಗಾಗಲೇ ಗುರುತಿನ ಚೀಟಿಯನ್ನು ಇಲಾಖೆಯ ವತಿಯಿಂದ ಅಂಟಿಸಲಾಗಿದೆ. ಬಾಕಿ ಉಳಿದ 47,000 ಮನೆಗಳ ಸರ್ವೆ ಕಾರ್ಯಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.
ಶಕ್ತಿ ಯೋಜನೆಯಡಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯು ವಂತೆ ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಬಸ್ ಗಳ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ಗ್ರಾಮೀಣ ಪ್ರದೇಶದ ಜನರಿಂದ ಬಸ್‌ಗಳಿಗಾಗಿ ಬೇಡಿಕೆಗಳು ಹಾಗೂ ಮನವಿ ಗಳು ಬರುತ್ತಿವೆ. ಸಾಧ್ಯವಾದಷ್ಟು ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಜನರು ಈ ಯೋಜನೆಯ ಲಾಭ ಪಡೆಯಲು ಅನುಕೂಲ ವಾಗುವಂತೆ ಕೆಎಸ್ಸಾರ್ಟಿಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಕೆಎಸ್ಸಾರ್ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಯುವ ನಿಧಿ ಯೋಜನೆಯಡಿ 5276 ಅಭ್ಯರ್ಥಿಗಳು ನೋಂದಣಿ ಯಾಗಿದ್ದು, 5016 ಫಲಾನುಭವಿಗಳಿಗೆ ಈವರೆಗೆ 13.67 ಕೋಟಿ ರೂ. ನೇರ ನಗದನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿದೆ ಎಂದ ಅವರು, ಪ್ರತಿ ವರ್ಷವೂ ಹೊಸ ಫಲಾನುಭವಿಗಳು ಆಯ್ಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವನಿಧಿ ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಸಂಬಂಧಿತ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಶ್ರಮಿಸಬೇಕು. ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯೂ ಗ್ಯಾರಂಟಿ ಯೋಜನೆ ಗಳಿಂದ ದೂರ ಉಳಿಯಬಾರದು. ಹಾಗೂ ಈ ಯೋಜನೆಯ ಯಶಸ್ವಿಗೂ ಎಲ್ಲರೂ ಸಹಕರಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷ ಸತೀಶ್, ಗೀತಾ ವಾಗ್ಲೆ, ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರಾದ ರಮೇಶ್ ಕಾಂಚನ್, ಸುನೀತಾ ಶೆಟ್ಟಿ, ನವೀನ್ ಚಂದ್ರ, ಮೋಹನ್ ಪೂಜಾರಿ, ಶಂಕರ ಶೇರಿಗಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
‘ಜಿಲ್ಲೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ಸದಸ್ಯರ ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪ್ರಕ್ರಿಯೆಯನ್ನು ಚುರುಕುಗೊಳಿಸಿ. ಪ್ರತೀ ಗ್ರಾಮ ಪಂಚಾಯತಿ, ವಾರ್ಡ್‌ಗಳಲ್ಲಿಯೂ ಸಮಿತಿಗಳ ರಚನೆಗೆ ಇಲಾಖಾ ಅಧಿಕಾರಿ ಗಳೊಂದಿಗೆ ಗ್ಯಾರಂಟಿ ಯೋಜನೆಗಳ ತಾಲೂಕು, ಹೋಬಳಿ ಮಟ್ಟದ ಪದಾಧಿಕಾರಿಗಳು ಕೈಜೋಡಿಸಿ, ಯೋಜನೆಯ ಯಶಸ್ಸಿಗೆ ಸಹಕರಿಸಬೇಕು.
-ಅಶೋಕಕುಮಾರ್ ಕೊಡವೂರು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ.






