ಆಧುನಿಕ ನ್ಯಾಯಾಂಗ ವ್ಯವಸ್ಥೆಗೆ ಸನ್ನದ್ಧರಾಗಿ: ನ್ಯಾ.ಅರುಣ್

ಉಡುಪಿ, ಆ.11: ಆಧುನಿಕ ವ್ಯವಸ್ಥೆಯಲ್ಲಿ ವಕೀಲ ವೃತ್ತಿಯು ಅತ್ಯಂತ ಸವಾಲಿನದ್ದಾಗಿದ್ದು, ಈ ಸವಾಲನ್ನು ಮೆಟ್ಟಿ ನಿಲ್ಲಲು ಇಂದಿನ ವಕೀಲರು ಸನ್ನದ್ಧರಾಗಬೇಕಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳೂ, ಉಡುಪಿ ಜಿಲ್ಲೆಯ ನೂತನ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ಜ. ಎಂ.ಐ.ಅರುಣ್ ಕರೆ ನೀಡಿದ್ದಾರೆ.
ಉಡುಪಿ ವಕೀಲರ ಸಂಘಕ್ಕೆ ಇತ್ತೀಚೆಗೆ ಭೇಟಿ ನೀಡಿ ವಕೀಲರ ಸಂಘದ ಸದಸ್ಯರನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಉತ್ತಮ ಸೇವೆ ಮತ್ತು ಕಕ್ಷಿದಾರರ ಹಿತ ಕಾಪಾಡುವ ವಕೀಲರಿಗೆ ಯಾವತ್ತೂ ಕಕ್ಷಿಗಳ ಕೊರತೆ ಕಂಡುಬರುವುದಿಲ್ಲ. ಉತ್ಕೃಷ್ಟ ನ್ಯಾಯಿಕ ಸೇವೆಯ ಮೂಲಕ ವಕೀಲಿ ವೃತ್ತಿಯಲ್ಲಿ ಜೀವನವನ್ನು ಉತ್ತಮ ಪಡಿಸಿಕೊಳ್ಳ ಬಹುದಾಗಿದೆ. ಅಮೆರಿಕಾ ದಲ್ಲಿ ಅತೀ ಹೆಚ್ಚು ಗಳಿಕೆ ಹೊಂದಿರುವ ಕ್ಷೇತ್ರ ಎಂದರೆ ಅದು ವಕೀಲಿ ವೃತ್ತಿಯಾಗಿದೆ. ಭಾರತದಲ್ಲೂ ಇಂತಹ ವಾತಾವರಣ ಸೃಷ್ಟಿಯಾಗ ಬೇಕಾದಲ್ಲಿ ವೃತ್ತಿಯಲ್ಲಿ ಪಕ್ವತೆ ಮತ್ತು ಶ್ರೇಷ್ಠತೆಯಲ್ಲಿ ಬದಲಾವಣೆ ಆಗಬೇಕಾಗಿದೆ ಎಂದರು.
ಕಕ್ಷಿದಾರರಿಗೆ ಕಡಿಮೆ ವೆಚ್ಚದಲ್ಲಿ ಶೀಘ್ರ ನ್ಯಾಯದಾನ ನೀಡಲು ವಕೀಲರು ಸಹರಿಸಬೇಕೆಂದು ಅವರು ವಕೀಲರಿಗೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ನೂತನ ಆಡಳಿತ ನ್ಯಾಯಮೂರ್ತಿಗಳಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಗೌರವಿಸಲಾಯಿತು.
ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು.







