ಉಡುಪಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ಶೋ; ಸಾವಿರಾರು ಜನರಿಂದ ಪುಷ್ಪವೃಷ್ಠಿ

ಉಡುಪಿ, ನ.28: ಉಡುಪಿಗೆ ಶುಕ್ರವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಗರದಲ್ಲಿ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಪುಷ್ಪವೃಷ್ಠಿಯ ಮಾಡಿ ಪ್ರಧಾನಿಯನ್ನು ಸ್ವಾಗತಿಸಿದರು.
ಬೆಳಗ್ಗೆ 11ಗಂಟೆಗೆ ಎರಡು ಬೆಂಗಾವಲು ಹೆಲಿಕಾಪ್ಟರ್ ನೊಂದಿಗೆ ಆದಿಉಡುಪಿ ಹೆಲಿಪ್ಯಾಡ್ ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹಾಜರಿದ್ದರು.
ಅಲ್ಲಿಂದ ರಸ್ತೆ ಮೂಲಕ ಆಗಮಿಸಿದ ಮೋದಿ, ಬೆಳಗ್ಗೆ 11.10ಕ್ಕೆ ಸುಮಾರು 30 ವಾಹನಗಳೊಂದಿಗೆ ರೋಡ್ ಶೋ ಆರಂಭಿಸಿದರು. ಬನ್ನಂಜೆ ನಾರಾಯಣಗುರು ವೃತ್ತದಿಂದ ಆರಂಭಗೊಂಡ ರೋಡ್ ಶೋ, ಬನ್ನಂಜೆ, ಶಿರಿಬೀಡು, ಸಿಟಿ ಬಸ್ ನಿಲ್ದಾಣ, ಕಲ್ಸಂಕದವರೆಗೆ ನಡೆಯಿತು. ಅಲ್ಲಿಂದ ನೇರವಾಗಿ ಪ್ರಧಾನಿ ಶ್ರೀಕೃಷ್ಣ ಮಠಕ್ಕೆ ತೆರಳಿದರು.
ರೋಡ್ ಶೋನಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಹಸ್ರಾರು ಮಂದಿ ಅಭಿಮಾನಿಗಳು, ಮೋದಿಗೆ ಪುಷ್ಪವೃಷ್ಠಿಗೈದರು. ನೆರೆದಿದ್ದ ಜನರು ಮೋದಿ ಮೋದಿ ಎಂಬ ಘೋಷಣೆಗಳನ್ನು ಕೂಗುತ್ತ ಪ್ರಧಾನಿಯನ್ನು ಕಂಡು ಸಂಭ್ರಮಿಸಿದರು.
ಪ್ರಧಾನಿ ರೋಡ್ ಶೋ ಹಿನ್ನೆಲೆಯಲ್ಲಿ ಬನ್ನಂಜೆ, ಕಾಟನ್ ಕಿಂಗ್ ಶೋರೂಮ್ ಬಳಿ, ಸಿಟಿ ಬಸ್ ನಿಲ್ದಾಣದ ಹರ್ಷ ಶೋರೂಂ ಬಳಿ ವೇದಿಕೆಗಳನ್ನು ನಿರ್ಮಿಸಿ, ನೃತ್ಯ, ಯಕ್ಷಗಾನ, ಹುಲಿ ವೇಷ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ರೋಡ್‌ಶೋ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬೆಳಗ್ಗೆ 9ಗಂಟೆ ವೇಳೆ ಸಂಪೂರ್ಣ ವಾಹನ ಹಾಗೂ ಜನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಅಲ್ಲದೆ ಬಾಂಬ್ ನಿಷ್ಕ್ರೀಯ ದಳ, ಪೊಲೀಸರು, SPG(ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್) ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರ ಬ್ಯಾಗ್ ಸಹಿತ ಸಂಪೂರ್ಣ ತಪಾಸಣೆ ನಡೆಸಿದರು. ಎಲ್ಲ ಕಡೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ 1.25ರ ಸುಮಾರಿಗೆ ವಾಪಾಸ್ಸು ತೆರಳಿದರು. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೆಳಗ್ಗೆ 7ಗಂಟೆಯಿಂದಲೇ ನಗರಕ್ಕೆ ವಾಹನ ಸಂಚಾರ ನಿರ್ಬಂಧ ವಿಧಿಸಿದ್ದರಿಂದ ನಗರದಲ್ಲಿ ವಾಹನ ಹಾಗೂ ಜನ ಸಂಚಾರ ತೀರಾ ವಿರಳವಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗಂಟೆಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು.
►ಪೊಲೀಸರೊಂದಿಗೆ ಮಾತಿನ ಚಕಮಕಿ :
ಬಿಗಿ ಭದ್ರತೆ ಮಧ್ಯೆಯೂ ಬಿಜೆಪಿ ಕಾರ್ಯಕರ್ತರು ಬನ್ನಂಜೆಯಲ್ಲಿ ನಿರ್ಮಿಸಿದ ವೇದಿಕೆ ಸಮೀಪ ನೀರಿನ ಕ್ಯಾನ್ ಸರಬರಾಜು ಮಾಡುತ್ತಿದ್ದ ವಿಚಾರದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಕಾರ್ಯಕರ್ತರಿಗೆ ಪೊಲೀಸರ ಜೊತೆ ಸಹಕರಿಸುವಂತೆ ಸೂಚಿಸಿದರು. ಈ ಸಂದರ್ಭ ಬಿಜೆಪಿ ಕಾರ್ಯಕರ್ತರು, ನೀರಿನ ಕ್ಯಾನ್ ಹಾಗೂ ಟೇಬಲ್‌ಗಳನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಲಾಯಿತು.







