ಉಡುಪಿ: ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಪ್ರತಿಭಟನೆ

ಮಣಿಪಾಲ: ಕರ್ನಾಟಕ ದಲಿತ ಹಕ್ಕುಗಳ ಸಮಿತಿಯ ಉಡುಪಿ ಜಿಲ್ಲಾ ಸಂಚಾಲನ ಸಮಿತಿ ನೇತೃತ್ವದಲ್ಲಿ ರಾಜ್ಯ ಸಮಿತಿ ಕರೆಯ ಮೇರೆಗೆ ರಾಜ್ಯದಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ದಲಿತರ ಹತ್ಯೆ, ದೇವಾಲಯ ಪ್ರವೇಶ ನಿರಾಕರಣೆ, ದಲಿತ ಮಹಿಳೆಯರ ಅತ್ಯಾಚಾರ, ದಲಿತರಿಗೆ ನೀಡುತ್ತಿರುವ ಕಿರುಕುಳ ಖಂಡಿಸಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ಉದ್ದೇಶಿಸಿ ಮಾತಾನಾಡಿದ ಜಿಲ್ಲಾ ಸಂಚಾಲಕ ಸಂಜೀವ ಬಳ್ಕೂರು, ಮಂಡ್ಯದ ಕೆ.ಆರ್.ಪೇಟೆಯಲ್ಲಿ ದಲಿತ ಜಯಕುಮಾರ್ ಜಮೀನು ಅಕ್ರಮಣ ಮಾಡಲು ಮುಂದಾದ ರೌಡಿ ಶೀಟರ್ ಅನಿಲ್ ಕುಮಾರ್, ಜಯಕುಮಾರ್‌ನ್ನು ಕೊಲೆ ಮಾಡಿದ್ದು ಪತ್ನಿ ಲಕ್ಷೀ ಪೋಲಿಸ್ ಠಾಣೆ ಮೆಟ್ಟಿಲು ಏರಿ ಕೇಸು ದಾಖಲಿಸಲು ಮುಂದಾದಾಗ ಪೋಲೀಸರು ಕೇಸ್ ಪಡೆಯದೆ ಸತಾಯಿಸಿ ವಾಪಾಸು ಕಳುಹಿಸಿದ್ದು ಎಲ್ಲರ ಗಮನಕ್ಕೆ ಬಂದಿದೆ ಎಂದರು.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಬನವಾಸಿ ಗ್ರಾಮದ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಮತ್ತು ದೇವಸ್ಥಾನ ಪ್ರವೇಶ ನಿರಾಕಾರಿಸಿದ್ದು ಜನತೆ ನಾಚಿಕೆ ಪಡುವಂತಾಗಿದೆ.ಬಿಡದಿ ಹೋಬಳಿ, ಭದ್ದರಾಪುರ ಗ್ರಾಮದ ಬಡಾ ಕೂಲಿಕಾರ ಕುಟುಂಬದ ದಲಿತ ಬಾಲಕಿಯನ್ನು ಆತ್ಯಾಚಾರ ಮಾಡಿ ಕೊಲೆ ಗೈದಿರುತ್ತಾರೆ. ಇದನ್ನು ಪೋಲಿಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮುಚ್ಚಿ ಹಾಕಲು ಪ್ರಭಾವಿ ವ್ಯಕ್ತಿಗಳು ಪ್ರಯತ್ನಿಸಿದ್ದರು.
ಅದೇ ರೀತಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕವಣಗಾಲಿ ದೇವಾಲಯದಲ್ಲಿ ದಲಿತರಿಗೆ ಪ್ರವೇಶ ನಿರಾಕರಣೆ ಮತ್ತು ಕೊಲ್ಲೂರು ಪ್ರದೇಶದಲ್ಲಿ ದಲಿತ ಮಹಿಳೆಯ ಮನೆಯನ್ನು ಯಾರೂ ಇಲ್ಲದ ಸಮಯದಲ್ಲಿ ಕೆಡವಿ ಜಾಗ ಆಕ್ರಮಣ ಮಾಡಲು ಮುಂದಾದ ಬಲಾಡ್ಯ ಶಕ್ತಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಮಿತಿಯ ಉಡುಪಿ ಸಹ ಸಂಚಾಲಕ ರವಿ ವಿ.ಎಂ., ಪದಾಧಿಕಾರಿಗಳಾದ ರಾಮ ಕಾರ್ಕಡ, ನಾಗರತ್ನ ನಾಡ, ಶಾರದ, ನಾಗರತ್ನ ಆರ್, ರಂಗನಾಥ ಸುವರ್ಣ, ಮನೋಜ್, ಸುಶೀಲ, ಪೂರ್ಣಿಮಾ ಬಳ್ಕೂರು, ಅಣಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಹಂಚು ಕಾರ್ಮಿಕ ಸಂಘದ ಕಾರ್ಯದರ್ಶಿ ಎಚ್.ನರಸಿಂಹ, ಸಿಐಟಿಯು ಕುಂದಾಪುರ ತಾಲೂಕು ಸಂಚಾಲಕ ಚಂದ್ರಶೇಖರ, ಸಿಐಟಿಯು ಉಡುಪಿ ವಲಯ ಸಂಚಾಲಕ ಕವಿರಾಜ್ ಎಸ್. ಕಾಂಚನ್ ಉಪಸ್ಥಿತರಿದ್ದರು.







