ಪಾರಂಪಳ್ಳಿ ಅನಧಿಕೃತ ಘನ ತ್ಯಾಜ್ಯ ಘಟಕದ ವಿರುದ್ಧ ಪ್ರತಿಭಟನೆ: ಕೋಟ ನಾಗೇಂದ್ರ ಪುತ್ರನ್ ಎಚ್ಚರಿಕೆ

ಉಡುಪಿ: ಕಳೆದ 5-6ವರ್ಷಗಳಿಂದ ಸ್ಥಳೀಯರು ಹಾಗೂ ಸಾರ್ವಜನಿಕರ ನಿರಂತರ ವಿರೋಧದ ನಡುವೆಯೂ ಪಾರಂಪಳ್ಳಿ ಗ್ರಾಮದ ಸರ್ವೆ ನಂಬರ್ 104/24,25ರಲ್ಲಿ ಅನಧಿಕೃತವಾಗಿ ಘನ ತ್ಯಾಜ್ಯ ಘಟಕವನ್ನು ಉದ್ಘಾಟಿಸಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕ್ರಮದ ವಿರುದ್ಧ ಉಗ್ರ ಹೋರಾಟವನ್ನು ಸಂಘಟಿಸುವುದಾಗಿ ಈ ಯೋಜನೆ ವಿರುದ್ಧ ನಿರಂತರಾಗಿ ಹೋರಾಟ ನಡೆಸಿಕೊಂಡು ಬಂದಿರುವ ಕೋಟ ನಾಗೇಂದ್ರ ಪುತ್ರನ್ ಹಾಗೂ ಪಾರಂಪಳ್ಳಿಯ ಗ್ರಾಮಸ್ಥರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀತಾನದಿಗೆ ಕೇವಲ 10 ಮೀ.ದೂರದಲ್ಲಿ ನಿರ್ಮಾಣಗೊಂಡಿರುವ ಈ ಘನ ತ್ಯಾಜ್ಯ ಘಟಕದಿಂದ ಸುತ್ತಮುತ್ತಲಿನ ಮನೆ, ಕೃಷಿ ಭೂಮಿಗೆ ತೊಂದರೆ ಉಂಟಾಗಲಿದ್ದು, ಪರಿಸರ ಮಾಲಿನ್ಯ, ಸಾಂಕ್ರಾಮಿಕ ರೋಗಗಳು ಹೆಚ್ಚಲಿರುವ ಭೀತಿ ಸ್ಥಳೀಯರಲಿದ್ದು, ತಮ್ಮ ವಿರೋಧದ ನಡುವೆಯೂ ಸಾಲಿಗ್ರಾಮ ಪ.ಪಂ. ಇದರ ಉದ್ಘಾಟನೆ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
ಇಲ್ಲೇ ಹಿಂದೆ ಮೀನು ಸಂಸ್ಕರಣ ಘಟಕವನ್ನು ಪ್ರಾರಂಭಿಸಿದಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿ ನಿರ್ಮಾಣ ಹಂತದಲ್ಲಿದ್ದ ಮೀನು ಸಂಸ್ಕರಣ ಘಟಕವನ್ನು ಮುಚ್ಚಿಸಿದ್ದರು. ಕಾನೂನಿನಂತೆ ಸಿಆರ್‌ಝಡ್ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ, ಅಲ್ಲದೇ ಕೃಷಿ ಭೂಮಿಯ ಬಳಿ ತ್ಯಾಜ್ಯ ನಿರ್ವಹಣೆ ಘಟಕ ನಿರ್ಮಿಸುವಂತಿಲ್ಲ ಎಂದವರು ಹೇಳಿದರು.
ಕೆಲ ವರ್ಷಗಳ ಹಿಂದಿನವರೆಗೂ ಹಚ್ಚಹಸಿರಿನ ಪ್ರದೇಶವಾಗಿದ್ದು, ಈ ತಾಣ ಇನ್ನು ರೋಗರುಜಿನಗಳ ಬೀಡಾಗುವ ಸಾಧ್ಯತೆ ಇದೆ. ಘಟಕದ ಉದ್ಘಾಟನೆಗೆ ಬಂದಿರುವ ಸಂಸದರು ಹಾಗೂ ಶಾಸಕರು ಇಲ್ಲಿರುವ ಯಾವುದೇ ಅಕ್ರಮಗಳನ್ನು ತಿಳಿದುಕೊಳ್ಳದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದು ದೂರಿದರು.
ಈ ಜಾಗದ ಭೂಪರಿವರ್ತನೆ, ಈಖಾತಾ ಆಗದಿದ್ದರೂ ಸರ್ವೆ ನಂ.104/ 24,25 ಜಾಗವನ್ನು ಸಾಲಿಗ್ರಾಮ ಪ.ಪಂ. ಖರೀದಿ ಮಾಡಿದೆ. ಈ ಮೂಲಕ ಕಂದಾಯ ಇಲಾಖೆಯ ಕಾನೂನನ್ನು ಉಲ್ಲಂಘಿಸಲಾಗಿದೆ. ಇದಕ್ಕೆ ಸಿಆರ್‌ಝಡ್‌ನಿಂದ ಯಾವುದೇ ಪರವಾನಿಗೆ ಪಡೆದಿಲ್ಲ. ಇಲ್ಲಿರುವ ರಸ್ತೆ ಖಾಸಗಿ ವ್ಯಕ್ತಿಯದ್ದಾಗಿದೆ ಎಂದು ನಾಗೇಂದ್ರ ಪುತ್ರನ್ ಹೇಲಿದರು.
2013ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ.ರೇಜು ಅವರು ಈ ಸರ್ವೆ ನಂ.ನಲ್ಲಿ ಕಟ್ಟಿರುವ ಕಟ್ಟಡ ಅನಧಿಕೃತ ಎಂದು ಘೋಷಣೆ ಮಾಡಿದ್ದರು. ಇದನ್ನು ಕುಂದಾಪುರ ಜೆಎಂಸಿ ಕೋರ್ಟ್ ಸಹ ಹೇಳಿದ್ದು, ಇದರ ಮಾಲಕನಿಗೆ 15 ಸಾವಿರ ರೂ.ದಂಡ ವಿಧಿಸಿತ್ತು. ಈ ಘಟಕಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಪರವಾನಿಗೆ ಪಡೆದಿಲ್ಲ ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರಾದ ಅಶೋಕ ಪೂಜಾರಿ, ಮಹೇಶ್ ಪೂಜಾರಿ ಪಾರಂಪಲ್ಳಿ, ಗಣಪತಿ ಹಾಗೂ ಗಣೇಶ ಸಾಲಿಗ್ರಾಮ ಉಪಸ್ಥಿತರಿದ್ದರು.







