ಮುಂದುವರಿದ ಕೊರಗರ ಧರಣಿ: ಜಯಪ್ರಕಾಶ್ ಹೆಗ್ಡೆ ಭೇಟಿ

ಉಡುಪಿ, ಜ.5: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳ ನೇತೃತ್ವದಲ್ಲಿ ಕೊರಗ ಸಮುದಾಯದ ಯುವ ಜನತೆಗೆ ಸರಕಾರಿ ಉದ್ಯೋಗಗಳಲ್ಲಿ ನೇರ ನೇಮಕಾತಿ ಒದಗಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ 22ನೆ ದಿನವಾದ ಸೋಮವಾರವೂ ಮುಂದುವರೆದಿದೆ.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ, ರಾಜ್ಯ ಹಿಂದುಳಿದವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಧರಣಿನಿರತರ ಅಹವಾಲು ಸ್ವೀಕರಿಸಿದರು. ಈ ಸಂಬಂಧ ಜ.9ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಈ ವಿಚಾರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ, ಸಂಯೋಜಕ ಕೆ.ಪುತ್ರನ್ ಹೆಬ್ರಿ ಮೊದಲಾದವರು ಉಪಸ್ಥಿತರಿದ್ದರು.
Next Story





