ಉಡುಪಿ ತಾಲೂಕು ವ್ಯಾಪ್ತಿಯ ಜನಸಂಪರ್ಕ ಸಭೆ, ಅಹವಾಲು ಸ್ವೀಕಾರ

ಉಡುಪಿ, ನ.18: ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕು ವ್ಯಾಪ್ತಿಗೆ ಬರುವ 10 ಗ್ರಾಪಂಗಳಿಗೆ ಸಂಬಂಧಿಸಿದ ಜನ ಸಂಪರ್ಕ ಸಭೆ ಹಾಗೂ ಸ್ವೀಕಾರ ಕಾರ್ಯಕ್ರಮ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಗುರ್ಮೆ, ಸಮೃದ್ಧ ಕಾಪು; ಸಾಮರಸ್ಯ ಕಾಪು ಎಂಬ ಕಲ್ಪನೆಯಲ್ಲಿ ಆಡಳಿತಕ್ಕೆ ಬಂದಿದ್ದೇನೆ. ಜನರ ಮನೆಬಾಗಿಲಿಗೆ ಆಡಳಿತ ಎಂಬುವುದು ಧ್ಯೇಯವಾಗಿದೆ. ಜನರ ಸಮಸ್ಯೆ ಪರಿಹಾರವೇ ನಮ್ಮ ಧ್ಯೇಯವಾಗಿದೆ. ಅಧಿಕಾರದಲ್ಲಿದ್ದಾಗ ಜನರ ಋಣ ತೀರಿಸುವ ಕೆಲಸವಾಗಬೇಕು. ನಮ್ಮ ಆತ್ಮ ಒಪ್ಪುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 65 ಅರ್ಜಿಗಳನ್ನು ಸ್ವೀಕರಿಸಿ, ಕೆಲವು ಅರ್ಜಿಗಳನ್ನು ಸಕ್ಷಮ ಅಧಿಕಾರಿಗಳ ಎದುರಿನಲ್ಲಿ ಇತ್ಯರ್ಥ ಪಡಿಸಲಾಯಿತು. ಉಳಿದ ಅರ್ಜಿಗಳಲ್ಲಿ ತಾಂತ್ರಿಕ ಹಾಗೂ ದಾಖಲೆಗಳ ಸಮಸ್ಯೆಗಳಿರುವುದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಶೀಘ್ರ ವಿಲೇವಾರಿಗೊಳಿಸುವಂತೆ ಶಾಸಕರು ಸೂಚಿಸಿದರು.
80 ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಕೇಶವ ಕೋಟ್ಯಾನ್, ಕೊಡಿಬೆಟ್ಟು ಗ್ರಾಪಂ ಅಧ್ಯಕ್ಷ ಸಂದೀಪ್ ಮಡಿವಾಳ, ಬೈರಂಪಳ್ಳಿ ಗ್ರಾಪಂ ಅಧ್ಯಕ್ಷ ಪ್ರಸಾದ್ ಮಲ್ಯ, ಪೆರ್ಡೂರು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ, ಉಡುಪಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಿಜಯಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಉಡುಪಿ ತಹಶೀಲ್ದಾರ್ ಗುರುರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಚೇರಿ ಸಿಬಂದಿ ಸುಧಾಕರ ಸ್ವಾಗತಿಸಿ, ವಂದಿಸಿದರು.







