ಸಾರ್ವಜನಿಕ ಸೇವೆಯೇ ನನ್ನ ಗುರಿ, ಉದ್ದೇಶ: ಎಚ್.ಡಿ.ಕುಮಾರಸ್ವಾಮಿ

ಕಾಪು (ಪಡುಬಿದ್ರಿ), ನ.16: ನನಗೆ ಯಾವುದೇ ಸ್ವಂತ ಉದ್ದೇಶವಿಲ್ಲ. ಸಾರ್ವಜನಿಕ ಜೀವನಕ್ಕೆ ಬಂದ ನಂತರ ಜನರ ಕಷ್ಟ-ಸುಖಗಳಲ್ಲಿ ಸಂಪೂರ್ಣ ಭಾಗಿಯಾಗಿದ್ದೇನೆ. ಸಾರ್ವಜನಿಕ ಹಾಗೂ ರಾಜಕೀಯ ಕ್ಷೇತ್ರಕ್ಕೆ ಬಂದಿರು ವುದು ವೈಯಕ್ತಿಕ ಲಾಭಕ್ಕಾಗಿ ಅಲ್ಲ. ದೇವರು ನನಗೆ ನೀಡಿರುವ ಶಕ್ತಿ, ಸಾಮರ್ಥ್ಯ ಮತ್ತು ಅವಕಾಶಗಳನ್ನು ನಾಡಿನ ಜನರ ಸೇವೆಗಾಗಿ ಧಾರೆ ಎರೆದಿದ್ದೇನೆ. ನನ್ನ ಸ್ವಂತಕ್ಕಾಗಿ ಯಾವುದನ್ನೂ ಬಳಸಿಕೊಂಡಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹಾಗೂ ಕರ್ನಾಟಕ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಕಾಪು ಮಾರಿಗುಡಿಗೆ ಭೇಟಿ ನೀಡಿದ ಸಚಿವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು. ಇಂದಿನ ರಾಜಕೀಯ ಪರಿಸ್ಥಿತಿ ಯಲ್ಲಿ ದೇವರ ಆಶೀರ್ವಾದವನ್ನು ಸ್ವಾರ್ಥಕ್ಕಾಗಿ ಎಂದಿಗೂ ಪಡೆದುಕೊಂಡಿಲ್ಲ. ಮುಂದೆಯೂ ಅಂತಹ ಉದ್ದೇಶ ನನಗಿಲ್ಲ ಎಂದರು.
ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿ ರಾಜ್ಯ ಸರಕಾರದ ಪ್ರಮುಖ ಜವಾಬ್ದಾರಿ ಯಾಗಿದೆ. ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಕೈಗಾರಿಕೆಗಳು ಜಾಗತಿಕ ಮಟ್ಟದಲ್ಲಿ ಸವಾಲಾಗಿ ನಿಲ್ಲುವಂತಾಗಬೇಕು. ನಮ್ಮ ಇಲಾಖೆಯ ವತಿಯಿಂದ ಆಟೋಮೊಬೈಲ್ ಸೇರಿದಂತೆ ವಿವಿಧ ಕೈಗಾರಿಕೆಗಳ ಉತ್ಪಾದನಾ ಘಟಕಗಳಿಗೆ ಉತ್ತೇಜನ ನೀಡಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಉತ್ಪಾದನಾ ಘಟಕಗಳಿಗೆ ಶೇ. 50ರಷ್ಟು ಸಬ್ಸಿಡಿ ಸೇರಿದಂತೆ ವಿವಿಧ ಪ್ರೋತ್ಸಾಹಕ ಯೋಜನೆಗಳನ್ನು ಜಾರಿಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಬಂಡವಾಳ ಹೂಡಿಕೆ ಹೆಚ್ಚಬೇಕು: ಆದರೆ ರಾಜ್ಯಕ್ಕೆ ಹೊಸ ಕೈಗಾರಿಕೆಗಳನ್ನು ತರುವಲ್ಲಿ ರಾಜ್ಯ ಸರ್ಕಾರದ ಸಹಕಾರವೂ ಅತ್ಯಗತ್ಯ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಯ ಪ್ರಮಾಣ ಇತರ ರಾಜ್ಯಗಳಿಗೆ ಹೋಲಿಸಿದರೆ ಇನ್ನಷ್ಟು ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಹಕಾರ ಕೋರಿದರೆ ನಮ್ಮ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದರು.
ಕರ್ನಾಟಕದ ಇಂದಿನ ಪರಿಸ್ಥಿತಿಯಲ್ಲಿ ಜನರ ಪರವಾಗಿ ಧ್ವನಿ ಎತ್ತುವುದು ಅನಿವಾರ್ಯವಾಗಿದೆ. ಯಾವುದೇ ಹೋರಾಟ ಯಶಸ್ವಿಯಾಗಬೇಕಾದರೆ ದೇವರ ಅನುಗ್ರಹವೂ ಅಗತ್ಯ. ಈ ನಿಟ್ಟಿನಲ್ಲಿ ದೇವರ ಆಶೀರ್ವಾದವನ್ನು ಕೋರಿ ಮುಂದಿನ ನಿರ್ಧಾರವನ್ನು ದೇವರಿಗೆ ಬಿಟ್ಟಿದ್ದೇನೆ ಎಂದು ಕುಮಾರಸ್ವಾಮಿ ನುಡಿದರು.






