ರೇಡಿಯೋ ಎಲ್ಲ ಮಾಧ್ಯಮಗಳಿಗಿಂತ ಭಿನ್ನ: ರವಿ ಬಸ್ರೂರು
ರೇಡಿಯೋ ಕುಂದಾಪ್ರ ಲಾಂಛನ -ರಾಗ ಬಿಡುಗಡೆ

ಕುಂದಾಪುರ, ಅ.27: ರೇಡಿಯೋ ಎನ್ನುವುದು ಮೊಬೈಲ್ ಅಥವಾ ಉಳಿದ ಮಾಧ್ಯಮಗಳಿಗಿಂತ ಭಿನ್ನ. ರೇಡಿಯೋ ಮೂಲಕ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ದೊರೆಯುತ್ತದೆ. ನಿಮ್ಮ ಒಳಗೊಂದು ಕಿಚ್ಚು ಹುಟ್ಟಬೇಕು. ನಮ್ಮವರೇ ನಮ್ಮನ್ನು ಪ್ರೀತಿಯಿಂದ ಪ್ರೋತ್ಸಾಹ ನೀಡಿದಾಗ ನಮ್ಮ ಸಾಧನೆಯ ಹಾದಿ ಸುಗಮ ವಾಗುತ್ತದೆ ಎಂದು ಸಂಗೀತ ನಿರ್ದೇಶಕ ರವಿ ಬಸ್ರೂರು ಹೇಳಿದ್ದಾರೆ.
ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಕಾಲೇಜಿನ ರೇಡಿಯೋ ಕುಂದಾಪುರ 89.6 ಎಫ್‌ಎಂನ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡುತಿದ್ದರು.
ಜಾದೂಗಾರ, ಸಾಹಿತಿ ಓಂ ಗಣೇಶ ಸಿಗ್ನೇಚರ್ ಟ್ಯೂನ್ ಬಿಡುಗಡೆ ಮಾಡಿ, ಒಂದು ಕಿವಿಯಿಂದ ಕೇಳಿ ಇನ್ನೊಬ್ಬರ ಕಿವಿಗೆ ಆಹಾರವಾಗುವುದು ರೇಡಿಯೋ ದಿಂದ ಸಾಧ್ಯ. ರೇಡಿಯೋ ಒಂದು ಪ್ರಗತಿದತ್ತವಾದ ವಿಶಿಷ್ಟವಾದ ವರ. ರೇಡಿಯೋ ಹೊರತು ಪ್ರಪಂಚ ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಕಾಲೇಜಿ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯ ಕೆ.ಶಾಂತರಾಮ್ ಪ್ರಭು ಮಾತನಾಡಿ, ಕಲಿಕೆಯಲ್ಲಿ ಸದಾ ಹೊಸತನ ಇರಬೇಕು. ನಿಂತ ನೀರಾಗಬಾರದು ಎಂದು ರೇಡಿಯೋ ಕೇಂದ್ರ ಆರಂಭಿಸ ಲಾಗಿದೆ. ಸುಮಾರು ಒಂದು ಕೋಟಿ ರೂ. ವ್ಯಯಿಸಿ ಸಮಾಜಕ್ಕೆ ಕಾಲೇಜಿನ 60ನೆ ವರ್ಷದ ಪ್ರಯುಕ್ತ ನೀಡುತ್ತಿರುವ ಕೊಡುಗೆ ಇದಾಗಿದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎ.ಎಸ್.ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಸ್ಥ ಮಂಡಳಿಯ ಸದಸ್ಯರಾದ ದೇವದಾಸ ಕಾಮತ್, ಸದಾನಂದ ಚಾತ್ರ, ಜಯಕರ ಶೆಟ್ಟಿ, ಅಭಿನಂದನ್ ಶೆಟ್ಟಿ, ಪ್ರಜ್ನೇಶ್ ಪ್ರಭು ಉಪಸ್ಥಿತರಿದ್ದರು. ಸಿಗ್ನೇಚರ್ ಟ್ಯೂನ್ ಮಾಡಿಕೊಟ್ಟ ರವಿ ಬಸ್ರೂರು, ಲಾಂಛನ ವಿನ್ಯಾಸಗೊಳಿಸಿದ ಕೇಶವ ಸಸಿ ಹಿತ್ಲು ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿ ಯು.ಎಸ್.ಶೆಣೈ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಸ್ವಾಗತಿಸಿ ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ಪಿ.ಯು. ಕಾಲೇಜು ಪ್ರಾಚಾರ್ಯ ಡಾ.ಜಿ.ಎಂ.ಗೊಂಡ ವಂದಿಸಿದರು.







