ತರಗತಿ ಕೊಠಡಿಯೊಳಗೆ ಸಮವಸ್ತ್ರ ಸಂಹಿತೆ ಮೀರಬಾರದು; ಆದೇಶ ಮರುಪರಿಶೀಲನೆಗೆ ರಘುಪತಿ ಭಟ್ ಆಗ್ರಹ

ಉಡುಪಿ: ಶಿಕ್ಷಣವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಮತ್ತು ಸಾಂವಿಧಾನಿಕ ಮೌಲ್ಯಗಳ ವೃದ್ಧಿಗೆ ಪೂರಕವಾಗಿರಬೇಕು. ಇಲ್ಲಿ ಜ್ಞಾನಾರ್ಜನೆ ಮೂಲ ಉದ್ದೇಶವಾಗಿರಬೇಕು. ಯಾವುದೇ ವಿಷಯದಲ್ಲೂ ವಿದ್ಯಾರ್ಥಿಗಳ ನಡುವೆ ತಾರತಮ್ಯ ಹಾಗೂ ಗೊಂದಲ ಉಂಟಾಗುವಂತಹ ವಿಷಯಗಳಿಗೆ ಆಸ್ಪದ ನೀಡಬಾರದು. ಸಮಾನತೆಯ ದೃಷ್ಟಿಯಿಂದ ಖಾಸಗಿ, ಸರ್ಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ತರಗತಿ ಕೊಠಡಿ ಒಳಗೆ ಎಲ್ಲರೂ ಏಕ ರೀತಿಯಲ್ಲಿ ಕಾಣುವ ಹಾಗೆ ಸಮವಸ್ತ್ರ ಸಂಹಿತೆಯನ್ನು ಮೀರಬಾರದು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.
ಸಮವಸ್ತ್ರ ಸಂಹಿತೆಗೆ ಆದ್ಯತೆಯನ್ನ ನೀಡಿ ಶಿಕ್ಷಣ ಸಂಸ್ಥೆಗಳಲ್ಲಿ ತರಗತಿ ಕೊಠಡಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಶಾಲಾ ಶಿಕ್ಷಣ ಇಲಾಖೆ ಹಿಂಪಡೆದು, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ನಿಗದಿತ ಸಮಸ್ತ್ರದ ಜೊತೆಗೆ ಹಿಜಾಬ್ ಸೇರಿದಂತೆ ಸೀಮಿತವಾದ ಸಾಂಪ್ರದಾಯಿಕ ಆಧಾರಿತ ಸಂಕೇತಗಳನ್ನು ಧರಿಸಲು ಅವಕಾಶ ನೀಡಿ ಆದೇಶ ಹೊರಡಿಸಿರುವುದನ್ನು ಮರುಪರಿಶೀಲಿಸುವಂತೆ ಅವರು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆರು ವಿದ್ಯಾರ್ಥಿನಿಯರು ಕಾಲೇಜಿನ ನಿಯಮದಂತೆ ಸಮವಸ್ತ್ರ ಸಂಹಿತೆಯನ್ನ ಪಾಲಿಸಿ ವ್ಯಾಸಂಗ ಮಾಡುತ್ತಿದ್ದರು. ಆದರೆ ಒಂದೂವರೆ ವರ್ಷದ ಬಳಿಕ ದುರುದ್ದೇಶ ಪೂರ್ವಕವಾಗಿ ತರಗತಿ ಕೊಠಡಿ ಒಳಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಆಗ್ರಹಿಸಿ ವಿವಾದ ಸೃಷ್ಟಿಸಿದರು. ಇದರಿಂದಾಗಿ ರಾಜ್ಯ ಹಾಗೂ ದೇಶದಾದ್ಯಂತ ಗೊಂದಲ ನಿರ್ಮಾಣವಾಗಿ ಶಿಕ್ಷಣ ವ್ಯವಸ್ಥೆಗೆ ಹಾಗೂ ಕಾನೂನು ವ್ಯವಸ್ಥೆಗೆ ಧಕ್ಕೆ ಉಂಟಾಗಿರುತ್ತದೆ. ಈ ಸಂದರ್ಭದಲ್ಲಿ ಕೆಲವು ಮತೀಯವಾದಿ ಸಂಘಟನೆಗಳು ಸೇರಿಕೊಂಡು ಹಿಜಾಬ್ ವಿವಾದದ ಮೂಲಕ ಶಾಂತಿ ಸುವ್ಯವಸ್ಥೆಗೂ ಧಕ್ಕೆ ತರುವ ಪ್ರಯತ್ನ ಮಾಡಿರುತ್ತಾರೆ. ನಾನು ಅಂದೂ ಒತ್ತಾಯಿಸಿದ್ದು ತರಗತಿ ಕೊಠಡಿಗಳಲ್ಲಿ ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು. ಇಂದು ನನ್ನ ಆ ಒತ್ತಾಯಕ್ಕೆ ಬದ್ಧನಾಗಿದ್ದೇನೆ. ಈ ಹಿಂದಿನ ಆದೇಶದಲ್ಲಿ ಶಾಲೆಯ ಕಂಪೌಂಡ್, ಕ್ಯಾಂಪಸ್ ಹಾಗೂ ಕಾರಿಡಾರ್ನಲ್ಲಿ ಹಿಜಾಬ್ ಧರಿಸಬಹುದು. ಆದರೆ ತರಗತಿ ಒಳಗೆ, ಪರೀಕ್ಷಾ ಕೊಠಡಿ ಒಳಗೆ ಸಮವಸ್ತ್ರ ಬಿಟ್ಟು ಯಾವುದೇ ಇತರ ಉಡುಗೆ ತೊಡುಗೆಗಳನ್ನು ಧರಿಸುವಂತಿರಲಿಲ್ಲ. ತರಗತಿ ಕೊಠಡಿ ಒಳಗೆ ಎಲ್ಲರೂ ಸಮಾನರು. ಇಲ್ಲಿ ಸಮವಸ್ತ್ರವನ್ನು ಮೀರಿ ಇತರ ವಿದ್ಯಾರ್ಥಿಗಳಿಗೆ ತೋರುವಂತೆ ತಾರತಮ್ಯ ಬರದಂತೆ ಏಕರೀತಿಯಲ್ಲಿ ಇರುವ ಹಾಗೆ ಎಲ್ಲ ವಿದ್ಯಾರ್ಥಿಗಳು ಇರುವುದು ಸೂಕ್ತ. ಸರ್ಕಾರ ಇದಕ್ಕೆ ಅವಕಾಶ ನೀಡಬೇಕು. ಹಾಗಾಗಿ ರಾಜ್ಯ ಸರಕಾರ ಈ ವಿಷಯದಲ್ಲಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸಿ ತರಗತಿ ಒಳಗೆ ಮತ್ತು ಪರೀಕ್ಷಾ ಕೊಠಡಿ ಒಳಗೆ ಸಮವಸ್ತ್ರವನ್ನು ಮೀರಿ ವಿದ್ಯಾರ್ಥಿಗಳಿಗೆ ತೋರುವಂತೆ ತಾರತಮ್ಯ ಬಾರದಂತೆ ಎಲ್ಲರೂ ಏಕರೀತಿಯಲ್ಲಿ ಇರುವ ಹಾಗೆ ಸಮವಸ್ತ್ರ ಸಂಹಿತೆಗೆ ಆದ್ಯತೆಯನ್ನು ನೀಡಬೇಕು ಎಂಬೂದು ನನ್ನ ಆಗ್ರಹವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.






