ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ
ಹಲವು ಮನೆಗಳು, ಅಡಿಕೆ ತೋಟಗಳು, ಶಾಲೆಗೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇಂದು ಕೂಡ ಮಳೆ ಮುಂದುವರೆದಿದೆ. ಬೆಳಗಿನ ಜಾವ ಹಲವೆಡೆ ಮಳೆಯಾಗಿದ್ದು, ಮಧ್ಯಾಹ್ನ ವೇಳೆ ಬಿಸಿಲಿನ ವಾತಾವಾರಣ ಕಂಡುಬಂತು. ಸಂಜೆ ಮತ್ತೆ ಮಳೆ ಮುಂದುವರೆದಿದೆ. ಜಿಲ್ಲೆಯಲ್ಲಿ ಒಟ್ಟು 10 ಮನೆಗಳಿಗೆ ಹಾನಿಯಾಗಿದ್ದು 2.05 ಲಕ್ಷ ರೂ. ನಷ್ಟ ಉಂಟಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ-15.3ಮಿ.ಮೀ., ಕುಂದಾಪುರ- 25.8ಮಿ.ಮೀ., ಉಡುಪಿ- 30.8ಮಿ.ಮೀ., ಬೈಂದೂರು-34.4ಮಿ.ಮೀ., ಬ್ರಹ್ಮಾವರ- 20.0ಮಿ.ಮೀ., ಕಾಪು-10.5ಮಿ.ಮೀ., ಹೆಬ್ರಿ- 25.0ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 23.7ಮಿ.ಮೀ. ಮಳೆಯಾಗಿದೆ ಎಂದು ವರದಿಯಾಗಿದೆ.
ಕುಂದಾಪುರ ತಾಲೂಕಿನ ಗಂಗೊಳ್ಳಿಯ ಶೋಭಾ, ಬ್ರಹ್ಮಾವರ ತಾಲೂಕಿನ ಬನ್ನಾಡಿಯ ಪಲ್ಲವಿ, ಆರೂರಿನ ಸಂತಾನ ಮಸ್ಕರೇನ್ಹಸ್, ಜಯಂತಿ ಹಾಗೂ ಭಾಸ್ಕರ ಪೂಜಾರಿ, ಬೈಕಾಡಿಯ ಲೂಕಾಸ್ ಲೂವಿಸ್, ನೀಲಾವರದ ಗಿರಿಜಾ, ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ವಿನೋದ, ಕುಕ್ಕೆಹಳ್ಳಿಯ ನಾಗರಾಜ ತಂತ್ರಿ ಹಾಗೂ ಲಕ್ಷ್ಮಿ ಆಚಾರ್ತಿ ಎಂಬವರ ಮನೆಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಕುಂದಾಪುರ ತಾಲೂಕಿನ ಉಳ್ಳೂರು 74 ಗ್ರಾಮದ ಸುಮನಾ, ಸರೋಜ ಹಾಗೂ ಜಯಕರ ಶೆಟ್ಟಿ ಎಂಬವರ ಅಡಿಕೆ ಬೆಳೆಗಳು ಹಾನಿಯಾಗಿವೆ. ಇದರಿಂದ ಒಟ್ಟು 50ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಉಡುಪಿ ತಾಲೂಕಿನ ಕಲ್ಯಾಣಪುರ ಗ್ರಾಪಂ ವ್ಯಾಪ್ತಿಯ ಮೂಡತೊನ್ಸೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗ ಮಂದಿರ ಹಾಗೂ ಕಟ್ಟಡದ ಮೇಲೆ ಭಾರೀ ಗಾಳಿಮಳೆಯಿಂದ ಮರ ಬಿದ್ದು ಅಪಾರ ಹಾನಿ ಯಾಗಿದೆ. ಇದರಿಂದ ಸುಮಾರು 2.5ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.







