ಉಡುಪಿಯಲ್ಲಿ ಗಾಳಿಮಳೆ: ಹಲವು ಮನೆಗಳಿಗೆ ಹಾನಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಗಾಳಿ ಮಳೆ ಶುಕ್ರವಾರವೂ ಮುಂದುವರೆದಿದ್ದು, ಇದರಿಂದ ಹಲವು ಮನೆಗಳ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ.
ಕಳೆದ 24 ಗಂಟೆ ಅವಧಿಯಲ್ಲಿ ಕಾರ್ಕಳ-42.7ಮಿ.ಮೀ., ಕುಂದಾಪುರ- 20.4ಮಿ.ಮೀ., ಉಡುಪಿ- 35.6ಮಿ.ಮೀ., ಬೈಂದೂರು- 37.5ಮಿ.ಮೀ., ಬ್ರಹ್ಮಾವರ-31.2ಮಿ.ಮೀ., ಕಾಪು- 51.2ಮಿ.ಮೀ., ಹೆಬ್ರಿ-30.3ಮಿ.ಮೀ. ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 33.4 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಾರ್ಕಳ ತಾಲೂಕಿನ ಸಾಣೂರಿನ ನಳಿನಿ ಎಂಬವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿ 50,000ರೂ. ನಷ್ಟವಾಗಿದೆ. ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಚೈತ್ರಾ ಎಂಬವರ ಮನೆಯ ಆವರಣ ಗೋಡೆ ಕುಸಿದು ಅಂದಾಜು 10,000ರೂ. ನಷ್ಟವಾಗಿದೆ.
ಅಂಪಾರು ಗ್ರಾಮದ ಗುಡಿಬೆಟ್ಟು ಎಂಬಲ್ಲಿನ ರಾಜೀವ ಪಂಗಡಗಾರ ಎಂಬವರ ಮನೆಯ ದನದ ಕೊಟ್ಟಿಗೆ ಮೇಲೆ ಮರ ಬಿದ್ದು 10,000ರೂ. ಹಾಗೂ ಗಂಗೊಳ್ಳಿ ಗ್ರಾಮದ ಲಲಿತ ಎಂಬವರ ಮನೆ ಮೇಲೆ ಹಲಸಿನ ಮರ ಬಿದ್ದು ಹಾನಿಯಾಗಿ 10,000ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.
28 ವಿದ್ಯುತ್ ಕಂಬಗಳು ಧರೆಗೆ
ಭಾರೀ ಗಾಳಿಮಳೆಯಿಂದ ಉಡುಪಿ ಜಿಲ್ಲೆಯಾದ್ಯಂತ ಹಲವು ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದಿದೆ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ವರದಿಯಾಗಿದೆ.
ಜಿಲ್ಲೆಯಲ್ಲಿ ಒಟ್ಟು 28 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದಿದ್ದು, 300 ಮೀಟರ್ ವಿದ್ಯುತ್ ತಂತಿ ಹಾಗೂ ನಾಲ್ಕು ಟ್ರಾನ್ಸ್ ಫಾರ್ಮರ್‌ಗಳಿಗೆ ಹಾನಿಯಾಗಿವೆ. ಇದರಿಂದ ಒಟ್ಟು 10.02ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೆಸ್ಕಾಂ ಇಂಜಿನಿಯರ್ ತಿಳಿಸಿದ್ದಾರೆ.







