ಉಡುಪಿ: ಅಪರಾಹ್ನದ ಬಳಿಕ ಬಿಡುವು ಪಡೆದ ಮಳೆ; ಹೆಚ್ಚಿದ ಹಾನಿ

ಉಡುಪಿ: ನಿರಂತರವಾಗಿ ಸುರಿಯುತಿದ್ದ ಮಳೆ, ಶುಕ್ರವಾರ ಅಪರಾಹ್ನದ ಬಳಿಕ ಬಿಡುವು ಪಡೆದ ಕಾರಣ ಉಡುಪಿ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರುವ ಬಿಡುವಂತಾಯಿತು. ನಿನ್ನೆ ಸಂಜೆಯಿಂದ ಇಂದು ಮುಂಜಾನೆಯವರೆಗೆ ನಿರಂತರವಾಗಿ ಸುರಿದ ಮಳೆ, ನೆರೆಯ ಭೀತಿಯನ್ನು ಉಂಟುಮಾಡಿತ್ತಲ್ಲದೇ, ಇಂದು ಪುನರಾರಂಭಗೊಳ್ಳಬೇಕಿದ್ದ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಆರಂಭವನ್ನು ಒಂದು ದಿನ ಮುಂದೂಡುವಂತೆ ಮಾಡಿತ್ತು.
ನಿರಂತರವಾಗಿ ಸುರಿದ ಮಳೆಯ ಹಿನ್ನೆಲೆಯಲ್ಲಿ ಮುಂಜಾನೆಯೇ ಜಿಲ್ಲಾದಿಕಾರಿಯವರು ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ಘೋಷಿಸಿದ್ದರು. ಇದರಿಂದ ಬೇಸಿಗೆ ರಜೆಯ ಕಳೆದು ಇಂದು ಶಾಲೆಗೆ ಬರಲು ಸಿದ್ಧರಾಗಿದ್ದ ಮಕ್ಕಳು ನಾಳೆಯವರೆಗೆ ಕಾಯುವಂತಾಯಿತು.
ಬೆಳಗ್ಗೆ 11ಗಂಟೆಯ ಬಳಿಕ ಮಳೆಯ ಬಿರುಸು ಕಡಿಮೆಯಾಯಿತು. 12 ಗಂಟೆಯ ಬಳಿಕ ಒಂದೆರಡು ಬಾರಿ ಬಿಸಿಲು ಸಹ ಆಕಾಶದಲ್ಲಿ ಕಾಣಿಸಿ ಕೊಂಡಿತ್ತು. ಆದರೆ ನಿರಂತರ ಮಳೆ ಹಾಗೂ ಗಾಳಿಯಿಂದ ಜಿಲ್ಲೆಯಲ್ಲಿ ಹಾನಿಯ ಪ್ರಕರಣಗಳು ಮಾತ್ರ ಹೆಚ್ಚಾಗಿವೆ.
ಮನೆಗೆ ನುಗ್ಗಿದ ನೀರು: ನಿರಂತರ ಮಳೆಯಿಂದ ಉಡುಪಿ ತಾಲೂಕು ಕೊಡವೂರು ಗ್ರಾಮದ ಕೊಳ ಪ್ರದೇಶದಲ್ಲಿ ಮಳೆ ನೀರು ಮನೆಯೊಂದಕ್ಕೆ ನುಗ್ಗಿ ಗೃಹಪಯೋಗಿ ವಸ್ತು ಹಾಗೂ ದಿನಸಿ ಸಾಮಗ್ರಿಗಳಿಗೆ ಹಾನಿಯಾಗಿದೆ ಎಂದು ಉಡುಪಿ ತಹಶೀಲ್ದಾರ್ ಕಚೇರಿಯ ಮಾಹಿತಿ ತಿಳಿಸಿದೆ.
ಬಾವಿಯ ಆವರಣಗೋಡೆ ಕುಸಿತ: ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ನಡಿಬೆಟ್ಟಿನ ಕರುಣಾಕರ ಶೆಟ್ಟಿ ಎಂಬವರ ತೋಟದ ಬಾವಿಯ ಆವರಣ ಗೋಡೆ ಪೂರ್ಣವಾಗಿ ಕುಸಿದು ಭೂಮಿಯೊಳಗೆ ಸೇರಿದೆ. ಇದರಿಂದ ಈಗ ಆಳವಾದ ನೀರಿನ ಹೊಂಡ ಮಾತ್ರ ಕಂಡುಬರುತ್ತಿದೆ. ಅದೇ ತಾಲೂಕಿನ ಮೊಳಹಳ್ಳಿ ಗ್ರಾಮದ ರಾಮ ಕುಲಾಲ ಎಂಬವರ ಮನೆಯ ಆವರಣ ಗೋಡೆ ಭಾರೀ ಮಳೆಗೆ ಕುಸಿದು ಬಿದ್ದಿದ್ದು ಒಂದು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ.
ಗಾಳಿ-ಮಳೆಯಿಂದ ತೋಟಗಾರಿಕಾ ಬೆಳೆಗಳಿಗೂ ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಹಕ್ಲಾಡಿಯ ಶಶಿಕಾಂತ ದಾಸ್ ಎಂಬವರ ಅಡಿಕೆ ತೋಟದಲ್ಲಿದ್ದ ಮರಗಳು ಧರಾಶಾಹಿಯಾಗಿವೆ. ಅದೇ ರೀತಿ ಗುಡಿಬೆಟ್ಟು ಮೇಲಬೆಟ್ಟು ಗಿರಿಜಮ್ಮ ಶೆಟ್ಟಿಯವರ ಮನೆಯ ಅಡಿಕೆ ತೋಟದ ಮೇಲೆ ದೊಡ್ಡ ಗಾತ್ರದ ಹುಣಸೆ ಮರ ಬಿದ್ದು ಅಡಿಕೆ ತೋಟಕ್ಕೆ ಭಾರೀ ಹಾನಿಯುಂಟಾಗಿದೆ.
ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿಕೇರಿಯಲ್ಲಿ ಮಂಜುಳಾ ಖಾರ್ವಿ ಹಾಗೂ ಸುರೇಶ್ ಖಾರ್ವಿ ಅವರ ಮನೆ ಮೇಲೆ ಮರ ಬಿದ್ದು ತಲಾ 50ಸಾವಿರ ರೂ.ಗಳಿಗೂ ಅಧಿಕ ಹಾನಿಯ ಅಂದಾಜು ಮಾಡಲಾಗಿದೆ.
11 ಮನೆಗಳಿಗೆ ಹಾನಿ, 8ಲಕ್ಷ ರೂ.ನಷ್ಟ: ಉಳಿದಂತೆ ಜಿಲ್ಲೆಯ ವಿವಿದೆಡೆಗಳಲ್ಲಿ 11ಕ್ಕೂ ಅಧಿಕ ಮನೆಗಳಿಗೆ ಹಾನಿಯುಂಟಾಗಿದ್ದು, ಎಂಟು ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರು ತಾಲೂಕು ಶಿರೂರು ಗ್ರಾಮದ ರಾಘು ಹಾಗೂ ರಫೀಕ್ ಎಂಬವರ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಯಾಗಿದ್ದು, ತಲಾ ಎರಡು ಲಕ್ಷ ರೂ.ನಷ್ಟ ಉಂಟಾಗಿರುವುದಾಗಿ ತಹಶೀಲ್ದಾರ್‌ರ ಮಾಹಿತಿ ತಿಳಿಸಿದೆ. ಅದೇ ರೀತಿ ಕಾಪ್ಸಿ ಎಂಬವರ ಮನೆಗೆ ಒಂದು ಲಕ್ಷ ರೂ.ನಷ್ಟವಾಗಿದೆ.
ಇನ್ನು ಕುಂದಾಪುರ ತಾಲೂಕು ಕರ್ಕುಂಜೆಯ ಸಂಜೀವ ಮೊಗವೀರ ಹಾಗೂ ಕಾಪು ತಾಲೂಕು ಪಲಿಮಾರು ಗ್ರಾಮದ ಗೋಪಾಲಕೃಷ್ಣ ಎಂಬವರ ಮನೆಗಳಿಗೂ ತಲಾ ಒಂದು ಲಕ್ಷ ರೂ.ನಷ್ಟ ಉಂಟಾಗಿದೆ.
ಉಡುಪಿ ತಾಲೂಕಿನ ಆತ್ರಾಡಿಯ ದೂಮ ಪೂಜಾರಿ, ಪೆರ್ಡೂರಿನ ಗುಲಾಬಿ ಆಚಾರ್ಯ, ಪಡುತೋನ್ಸೆಯ ಸುಂದರ ಕೋಟ್ಯಾನ್, ಮೀನಾ ಬಂಗೇರ, ಕುಂದಾಪುರ ಕಸಬಾದ ದಿನೇಶ್ ಎಂಬವರ ಮನೆಗಳಿಗೂ ಮಳೆಯಿಂದ ಭಾರೀ ಹಾನಿ ಉಂಟಾಗಿದೆ.
ಹವಾಮಾನ ಇಲಾಖೆಯು ನಾಳೆಗೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಯಾವುದೇ ಮಳೆಯ ಎಚ್ಚರಿಕೆಯನ್ನು ನೀಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಇನ್ನು ಮೂರು ದಿನಗಳ ಎಲ್ಲೋ ಅಲರ್ಟ್ ನೀಡಲಾಗಿದೆ. ಹೀಗಾಗಿ ನಾಳೆಯಿಂದ ಬಿಸಿಲಿನ ವಾತಾವರಣವನ್ನು ನಿರೀಕ್ಷಿಸಬಹುದಾಗಿದೆ.
ಜಿಲ್ಲೆಯಲ್ಲಿ ಮಳೆ ವಿವರ
ಶುಕ್ರವಾರ ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 96.1ಮಿ.ಮೀ. ಮಳೆಯಾಗಿದೆ.
ಬೈಂದೂರು 89.7ಮಿ.ಮೀ.
ಬ್ರಹ್ಮಾವರ 108.0ಮಿ.ಮೀ.
ಹೆಬ್ರಿ 58.9ಮಿ.ಮೀ.
ಕುಂದಾಪುರ 92.1ಮಿ.ಮೀ.
ಉಡುಪಿ 137.5ಮಿ.ಮೀ.
ಕಾಪು 182.1ಮಿ.ಮೀ.
ಕಾರ್ಕಳ 78.5ಮಿ.ಮೀ.







