ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ರಾಣಿ ಚೆನ್ನಮ್ಮ ಕೊಡುಗೆ ಅಪಾರ: ಉಡುಪಿ ಡಿಸಿ ಡಾ.ವಿದ್ಯಾಕುಮಾರಿ

ಉಡುಪಿ : ಆಧುನಿಕ ಕರ್ನಾಟಕ ನಿರ್ಮಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ನೀಡಿದ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದ್ದಾರೆ.
ಬುಧವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ವತಿಯಿಂದ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚೆನ್ನಮ್ಮನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.
ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದು, ಚೆನ್ನಮ್ಮರ ಹೋರಾಟದ ಮನೋ ಭಾವವು ಇಂದಿನ ಮಹಿಳೆ ಯರಿಗೆ ಮಾದರಿಯಾಗಿದೆ. ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳುವು ದರೊಂದಿಗೆ ಚೆನ್ನಮ್ಮರ ಶೌರ್ಯ ಸಾಹಸ, ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
೧೮೫೭ರ ಸ್ವಾತಂತ್ರ್ಯ ಸಂಗ್ರಾಮ/ ಸಿಪಾಯಿ ದಂಗೆಯ ಪೂರ್ವದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ಸಂದರ್ಭ ದಲ್ಲಿಯೂ ಎದೆಗುಂದದೇ ರಾಜ್ಯದ ರಕ್ಷಣೆಗೆ ಪಣತೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿ, ಬಂಧಿಸಲ್ಪಟ್ಟು ಬೈಲಹೊಂಗಲದ ಸೆರೆಮನೆಯಲಿದ್ದರು. ಸ್ಯಾತಂತ್ರ್ಯಕ್ಕಾಗಿ ಹೋರಾಡಿದ ಆಕೆಯ ಧೈರ್ಯ ಇಂದಿಗೂ ಅವಿಸ್ಮರಣೀಯ ಎಂದರು.
ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ ವಿಶೇಷ ಉಪನ್ಯಾಸ ನೀಡಿ, ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತನ್ನೆಲ್ಲ ವನ್ನೂ ಅರ್ಪಿಸಿದವರು ಕಿತ್ತೂರು ರಾಣಿ ಚೆನ್ನಮ್ಮ. ಚಿಕ್ಕಂದಿನಿಂದಲೇ ಶಸ್ತ್ರಾಭ್ಯಾಸ, ರಾಮಾಯಣ ಮಹಾಭಾರತ ಪುರಾಣಗಳ ಅಧ್ಯಯನ ಹಾಗೂ ಧಾರ್ಮಿಕ ವಿಚಾರಗಳು ಆಕೆಯನ್ನು ಕೆಚ್ಚೆದೆಯ ವೀರ ವನಿತೆಯನ್ನಾಗಿ ಮಾಡಿತು. ಗಂಡನಿಗೆ ಮಾರ್ಗದರ್ಶಕಿಯಾಗಿ ರಾಜ್ಯದ ಆಡಳಿತದಲ್ಲಿ ಸದಾ ಬೆನ್ನೆಲುಬಾಗಿ ನಿಂತಿದ್ದಳು ಎಂದರು.
ಗಂಡನ ಮರಣದ ನಂತರ ರಾಜ್ಯವನ್ನು ಮುನ್ನಡೆಸುತ್ತಾ ದತ್ತು ಮಗುವನ್ನು ಪಡೆದ ವಿಚಾರ ಚೆನ್ನಮ್ಮ ಮುಚ್ಚಿಟ್ಟ ಕಾರಣಕ್ಕೆ ಬ್ರಿಟಿಷರು ಸಿಟ್ಟಿಗೆದ್ದು ಇವಳ ಸಾಮ್ರಾಜ್ಯದ ಮೇಲೆ ದಾಳಿ ನಡೆಸಿ, ಅವಳ ಖಜಾನೆಯಲ್ಲಿದ್ದ ಸಂಪತ್ತಿನ ಭಂಡಾರಕ್ಕೆ ಬೀಗ ಜಡಿದು, ಇಬ್ಬರು ಇಂಗ್ಲೀಷ್ ಅಧಿಕಾರಿಗಳನ್ನು ನೇಮಕ ಮಾಡಿದಾಗ, ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ನಾಡನ್ನು ಅವರಿಂದ ಮುಕ್ತಗೊಳಿಸುವ ಪಣತೊಟ್ಟಿದ್ದಳು ಎಂದರು.
ಬ್ರಿಟಿಷರ ಹಣದಾಸೆಗೆ ಬಲಿಯಾಗಿ ಕೆಲವರು ಅವರೊಂದಿಗೆ ಶಾಮೀಲಾದ್ದರಿಂದ ಹೋರಾಟದಲ್ಲಿ ರಾಣಿ ಚೆನ್ನಮ್ಮ ಬಂಧಿಸ ಲ್ಪಡುತ್ತಾಳೆ. ಜೈಲಿನಿಂದ ಬಿಡುಗಡೆ ಸಾಧ್ಯವಿಲ್ಲವೆಂದು ಅರಿತ ಚೆನ್ನಮ್ಮ ತನ್ನನ್ನು ಸಂಪೂರ್ಣ ಆಧ್ಯಾತ್ಮದೆಡೆಗೆ ತೊಡಗಿಸಿ ಕೊಂಡು, ತನ್ನ ಬಳಿಯಿದ್ದ ಧಾರ್ಮಿಕ ಗ್ರಂಥಗಳನ್ನು ಅಧ್ಯಯನ ಮಾಡುತ್ತಾ ೧೮೨೯ರಲ್ಲಿ ಕೊನೆಯುಸಿರೆಳೆಯು ತ್ತಾಳೆ. ಇಂತಹ ನಿರಾಗ್ರಣಿಗಳ ದೇಶಪ್ರೇಮ, ಧೈರ್ಯ, ಸಾಹಸ, ಪರಾಕ್ರಮಗಳು ಇಂದಿಗೂ ಹೆಮ್ಮೆ ಮೂಡಿಸುವಂತಿದೆ ಎಂದರು.
ಉಡುಪಿ ಜಿಪಂ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಾರ್ಯದರ್ಶಿ ನರಸಿಂಹಮೂರ್ತಿ, ಜಂಗಮ ಮಠದ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಶಶಿಧರ್ ಕಾರ್ಯಕ್ರಮ ನಿರೂಪಿಸಿ ದರ. ಜಂಗಮ ಮಠದ ಡಾ. ನಿರಂಜನ ವಂದಿಸಿದರು.







