ಸೆ.1ರಿಂದ ರಂಜನಿ ಸಂಸ್ಮರಣ ಸಂಗೀತೋತ್ಸವ

ಉಡುಪಿ, ಆ.31: ಉಡುಪಿಯ ರಂಜನಿ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಸೆಪ್ಟಂಬರ್ 1ರಿಂದ 9ರವರೆಗೆ ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದ ಹತ್ತಿರವಿರುವ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಹಾಲ್ (ಐವೈಸಿ) ನಲ್ಲಿ ರಂಜನಿ ಸಂಸ್ಮರಣಾರ್ಥ 9 ದಿನಗಳ ಕಾಲ ದೇಶ-ವಿದೇಶದ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಸಂಗೀತೋತ್ಸವವನ್ನು ಆಯೋಜಿಸಲಾಗಿದೆ.
ಸೆ.1ರ ಬೆಳಗ್ಗೆ 10 ಗಂಟೆಗೆ ಮೂಲ್ಕಿಯ ನಾಗೇಶ್ ಬಪ್ಪನಾಡು ತಂಡದಿಂದ ನಾಗಸ್ವರ ವಾದನದೊಂದಿಗೆ ಸಂಗೀತೋತ್ಸ ವಕ್ಕೆ ಚಾಲನೆ ದೊರಕಲಿದೆ. ಬೆಳಗ್ಗೆ 11:45ರಿಂದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸೋಷಿಯಲ್ ಸೈನ್ಸಸ್ ವಿಭಾಗದ ಡೀನ್ ಡಾ.ಬಿಂದಾ ಪರಾಂಜಪೆ ಅವರಿಂದ ದೇವದಾಸಿಗಳ ಕುರಿತು ಉಪನ್ಯಾಸ ಕಾರ್ಯಕ್ರಮವಿದೆ.
ಸಂಜೆ 5:00ಕ್ಕೆ ಡಾ.ಬಿಂದಾ ಪರಾಂಜಪೆ ಅವರಿಂದ ಸಂಗೀತೋತ್ಸವದ ಅಧಿಕೃತ ಉದ್ಘಾಟನೆ ನೆರವೇರಲಿದೆ. ಬಳಿಕ ಮೊದಲ ಕಾರ್ಯಕ್ರಮವಾಗಿ ರಮಣ ಬಾಲಚಂದ್ರನ್ ಅವರಿಂದ ವೀಣಾವಾದನ ನಡೆಯಲಿದೆ. ಸೆ.2ರ ಸೋಮವಾರ ಸಂಜೆ 6ರಿಂದ ಚಾರುಮತಿ ರಘುರಾಮನ್ ವಯಲಿನ್ ಸೋಲೋ ಕಾರ್ಯಕ್ರಮ ನೀಡಲಿದ್ದಾರೆ.
ಸೆ.3ರ ಮಂಗಳವಾರ ಸಂಜೆ 6ಕ್ಕೆ ಪ್ರತಿಭಾನ್ವಿತ ಕಲಾವಿದೆ ಸ್ಫೂರ್ತಿ ರಾವ್ ಅವರಿಂದ ಹಾಡುಗಾರಿಕೆ, ಸೆ.4ರ ಬುಧವಾರ 6ಕ್ಕೆ ಪಾಲ್ಘಾಟ್ ರಾಮಪ್ರಸಾದ್ ಅವರ ಸಂಗೀತ ಕಾರ್ಯಕ್ರಮವಿದೆ. ಸೆ.5ರ ಗುರುವಾರ ಲತಾಂಗಿ ಪ್ರಸ್ತುತಿಯಾಗಿ ಸ್ಥಳೀಯ ಯುವ ಸಂಗೀತ ಕಲಾವಿದರ ಹಾಡುಗಾರಿಕೆ ನಡೆಯಲಿದೆ. ಶ್ರೇಯಾ ಕೊಳತ್ತಾಯ, ಸ್ಮತಿ ಭಾಸ್ಕರ್, ಆತ್ರೇಯಿ ಕೃಷ್ಣ, ಅರ್ಚನಾ, ಅದಿತಿ ಬಿಪಿ ಮತ್ತು ಸಮನ್ವಿ ಭಾಗವಹಿಸಲಿದ್ದಾರೆ.
ಸೆ.6ರ ಶುಕ್ರವಾರ ಶ್ರೀವಲ್ಸನ್ ಮೆನನ್ ಅವರಿಂದ ಸಂಗೀತ ಹಾಡುಗಾರಿಕೆ, ಸೆ.7ರ ಶನಿವಾರ ಗಣೇಶ ಚತುರ್ಥಿಯಂದು ಇಂದ್ರಾಳಿಯ ಲತಾಂಗಿಯಲ್ಲಿ ಸಂಜೆ 5:30ರಿಂದ ಭಜನಾ ಸತ್ಸಂಗ ನಡೆಯಲಿದೆ. ಸೆ.8ರ ರವಿವಾರ ಬೆಳಗ್ಗೆ 10ರಿಂದ ಚೆನ್ನೈಯ ಡಾ. ಶ್ರೀರಾಮ್ ಪರಶುರಾಮ್ ಅವರಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜರಗಲಿದೆ. ಸಂಜೆ 5ಕ್ಕೆ ಸಂಗೀತೋತ್ಸವದ ಸಮಾರೋಪದಲ್ಲಿ ಡಾ. ಶ್ರೀರಾಮ್ ಪರಶುರಾಮ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಚೆನ್ನೈಯ ಎಸ್. ಸ್ವರಾತ್ಮಿಕಾರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸೆ.9ರ ಸೋಮವಾರ ಸಂಗೀತೋತ್ಸವದ ಕೊನೆಯ ಕಾರ್ಯಕ್ರಮ ಜರಗಲಿದ್ದು ಚೆನ್ನೈಯ ಜೆ.ಬಿ. ಶ್ರುತಿಸಾಗರ್ ಅವರಿಂದ ಕೊಳಲುವಾದನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಂಗೀತಪ್ರಿಯರಿಗೆ, ಆಸಕ್ತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







