ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕಕ್ಕೆ ಮನವಿ

ಉಡುಪಿ, ಆ.28: ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಗೆ ಉಪಾಧ್ಯಕ್ಷರ ನೇಮಕ ಮಾಡುವಂತೆ ಗಲ್ಫ್ ಕನ್ನಡಿಗರ ಒಕ್ಕೂಟದ ನಿಯೋಗವೊಂದು ಆ.26ರಂದು ರಾಜ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಸಮಿತಿಗೆ ಕಳೆದ ಕೆಲವು ವರ್ಷಗಳಿಂದ ಉಪಾಧ್ಯಕ್ಷರ ನೇಮಕ ಪ್ರಕ್ರಿಯೆ ನಡೆದಿರಲ್ಲಿಲ್ಲ. ಈ ಸಮಿತಿಗೆ ಅಧ್ಯಕ್ಷರು ಮುಖ್ಯಮಂತ್ರಿಗಳೇ ಆಗಿದ್ದು, ಸರಕಾರದ ವತಿಯಿಂದ ಒಬ್ಬರು ಉಪಾಧ್ಯಕ್ಷರ ನೇಮಕಾತಿ ಆಗಬೇಕಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರನಾಡ ಕನ್ನಡಿಗರು ಸಲ್ಲಿಸಿದ ಬೇಡಿಕೆಗೆ ತಾತ್ವಿಕ ಒಪ್ಪಿಗೆ ನೀಡಿದ್ದರು ಎಂದು ಮನವಿ ಯಲ್ಲಿ ತಿಳಿಸಲಾಗಿದೆ.
ಮನವಿಗೆ ಸ್ಪಂದಿಸಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಸರಕಾರ ಪ್ರಣಾಳಿಕೆಯಲ್ಲಿ ಪ್ರಚಾರ ಪಡಿಸಿದಂತೆ ಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ಮಾಡಿ ತಕ್ಷಣ ಸಮಿತಿಗೆ ಉಪಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು. ನಿಯೋಗದಲ್ಲಿ ಗಲ್ಫ್ ಕನ್ನಡಿಗರ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕಲೀಲ್, ಗೌರವಾಧ್ಯಕ್ಷ ಹಾಗೂ ಕನ್ನಡಿಗರ ಕನ್ನಡ ಕೂಟ ಅಧ್ಯಕ್ಷ ಸಾಧನ ದಾಸ್, ಒಮಾನ್ ಕನ್ನಡಿಗ ರಮಾನಂದ ಪ್ರಭು, ಸೌದಿ ಅರೇಬಿಯಾ ನಿವಾಸಿ ಇಬ್ರಾಹಿಂ ಹುಸೇನ್ ಮೊದಲಾದವರು ಉಪಸ್ಥಿತರಿದ್ದರು.





