ಸಾಮಾಜಿಕ ಜಾಲತಾಣಗಳ ‘ಸುಳ್ಳು ನಿರೂಪಣೆ’ಗಳನ್ನು ಪ್ರತಿರೋಧಿಸಿ: ಬಿಜೆಪಿ ಕಾರ್ಯಕರ್ತರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಕರೆ

ಉಚ್ಚಿಲ (ಉಡುಪಿ), ಜೂ.13: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರಕಾರ ಹಾಗೂ ಬಿಜೆಪಿ ಪಕ್ಷದ ವಿರುದ್ಧ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಸುಳ್ಳು ನಿರೂಪಣೆಗಳ ಮಹಾಪೂರವನ್ನು ಸಕ್ರಿಯವಾಗಿ ಪ್ರತಿರೋಧಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಉಚ್ಚಿಲದ ಮಹಾಲಕ್ಷ್ಮೀ ಸಭಾಂಗಣದಲ್ಲಿ ಇಂದು ಪ್ರಾರಂಭಗೊಂಡ ಎರಡು ದಿನಗಳ ಬಿಜೆಪಿ ಪಕ್ಷದ ಪಂ. ದೀನದ ಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಜಿಲ್ಲಾ ಪ್ರಶಿಕ್ಷಣ ವರ್ಗದ ಸಮಯ ಸಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೇಂದ್ರ ಸರಕಾರ, ಪಕ್ಷ ಹಾಗೂ ಪ್ರಧಾನಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ನಿರೂಪಣೆ ಗಳಲ್ಲಿ ಹೆಚ್ಚಿನವುಗಳಲ್ಲಿ ಯಾವುದೇ ಸತ್ಯಗಳಿರುವುದಿಲ್ಲ. ಇವೆಲ್ಲವೂ ಸುಳ್ಳು ಸುದ್ದಿ (ಫೇಕ್ ನ್ಯೂಸ್)ಗಳಾಗಿರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಇಂಥ ಸುಳ್ಳುಸುದ್ದಿ, ನಿರೂಪಣೆಗಳನ್ನು ಹರಡಲು ಕೆಲವು ನಿರ್ದಿಷ್ಟ ಗುಂಪುಗಳು, ನಮ್ಮ ಗಡಿಭಾಗದ ದೇಶಗಳು ಹಾಗೂ ಭಾರತದೊಂದಿಗೆ ಯಾವುದೇ ನೈಜ ಸಂಬಂಧವನ್ನು ಹೊಂದಿರದ ವಿದೇಶದ ಸಂಸ್ಥೆಗಳು ಹಣಕಾಸಿನ ಬೆಂಬಲವನ್ನು ನೀಡುತ್ತವೆ ಎಂದು ಹಣಕಾಸು ಸಚಿವೆ ಆರೋಪಿಸಿದರು.
‘ಇಂಥ ಸುಳ್ಳು ನಿರೂಪಣೆಗಳನ್ನು ‘ಪೆಯ್ಡ್ ಸೈನಿಕರು’ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿರುತ್ತವೆ. ಬಿಜೆಪಿಯ ಕಾರ್ಯಕರ್ತರು ಈ ಕುರಿತು ಜಾಗೃತರಾಗಿದ್ದು, ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ಇವುಗಳಿಗೆ ಪ್ರತಿರೋಧವನ್ನು ನೀಡಬೇಕು.’ ಎಂದು ಅವರು ಹೇಳಿದರು.
‘ಇಂಥ ಸುಳ್ಳು ಸುದ್ದಿಗಳನ್ನು ಎದುರಿಸಲು ನಿಜವಾದ ಮಾಹಿತಿಗಳನ್ನು ಒಳಗೊಂಡ, ಸರಕಾರವನ್ನು ಸಮರ್ಥಿಸುವ ನೈಜ ವೆಬ್‌ಸೈಟ್‌ಗಳ ಲಿಂಕ್‌ಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು. ಅವುಗಳ ಮೂಲಕ ಇಂಥ ಸುಳ್ಳು ಸುದ್ದಿಗಳಿಗೆ ಪರಿಣಾಮಕಾರಿ ಪ್ರತ್ಯುತ್ತರಗಳನ್ನು ನೀವು ನೀಡಬೇಕು. ಇದಕ್ಕಾಗಿ ನೀವು ಅವರೊಂದಿಗೆ ಜಗಳ ಕಾಯ ಬೇಕಿಲ್ಲ. ಬದಲಿಗೆ ನಿಮಗೆ ಅಧಿಕೃತ, ವಿಶ್ವಾಸಾರ್ಹ ಮೂಲಗಳ ಮೂಲಕ ಸಿಗುವ ಮಾಹಿತಿ ಗಳನ್ನು ತಕ್ಷಣವೇ ಹಾಕಿ, ಕಪೋಲಕಲ್ಪಿತ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡದಂತೆ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು.
ಜಾಲತಾಣಗಳಿಂದ ಟಿವಿಗೆ: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿ ಕೊಳ್ಳುವ ಸುಳ್ಳು ಸುದ್ದಿಗಳನ್ನೇ ಬಳಸಿಕೊಂಡು ಟೆಲಿವಿಷನ್ ಚಾನೆಲ್‌ಗಳು ಇವುಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಸುತ್ತವೆ. ಬಳಿಕ ಅವು ಸುದ್ದಿಪತ್ರಿಕೆಗಳಿಗೂ ಸುದ್ದಿಯಾ ಗುತ್ತವೆ. ಆದರೂ ಕೆಲವು ಪತ್ರಿಕೆಗಳು ಸುದ್ದಿಗಳ ನೈಜತೆಯನ್ನು ಹಲವು ಮೂಲಗಳಿಂದ ಪರಿಶೀಲಿಸಿ ಸಂಯಮ ದಿಂದ ಪ್ರಕಟಿಸುತ್ತವೆ ಎಂದರು.
ಸರಕಾರದ ಭಾಗವಾದ ಪಿಐಬಿ ಸರಿಯಾದ ಮಾಹಿತಿಗಳನ್ನು ನೀಡುತ್ತವೆ. ಸುಳ್ಳು ಸುದ್ದಿ ಹರಡದಂತೆ ತಡೆಯುವಲ್ಲಿ ಕಾರ್ಯಕರ್ತರು ಮಾತ್ರವಲ್ಲ, ನಮ್ಮ ಸಂಸದರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಹಿರಿಯ ನಾಯಕರು ಸಕ್ರಿಯವಾಗಬೇಕು. ಸರಕಾರ, ಪಕ್ಷವನ್ನು ಸಮರ್ಥಿಸುವ ಮಾಹಿತಿಗಳನ್ನು ಇವರೆಲ್ಲರೂ ತಮ್ಮ ಪೋಸ್ಟ್‌ಗಳ ಮೂಲಕ ಹಂಚಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನಿಲ್‌ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಕೆ.ಉದಯಕುಮಾರ್ ಶೆಟ್ಟಿ, ಶಿಲ್ಪಾ ಜಿ.ಸುವರ್ಣ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿದರೆ, ಶಿಬಿರದ ಸಂಚಾಲಕ ಕೆ.ಬಿ.ಶೆಟ್ಟಿ ವಂದಿಸಿದರು.
ಕಾಂಗ್ರೆಸ್, ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ
ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಇವರು ವಿಷಯಗಳ ಬಗ್ಗೆ ಅರ್ಥಪೂರ್ಣ ಸಂವಾದ ನಡೆಸುವ ಬದಲು ‘ಭಯದ ವ್ಯಾಪಾರಿ’ ಗಳಾಗಿರುತ್ತಾರೆ. ಇದರಿಂದ ಸಂಸತ್‌ನಲ್ಲಿ ಒಂದೇ ಒಂದು ಉತ್ತಮ ಚರ್ಚೆ, ಸಂವಾದ ನಡೆಯುತ್ತಿಲ್ಲ. ದೇಶಕ್ಕೆ ನಾವಿಂದು ಕಾಣುತ್ತಿರುವ ರೀತಿಗೆ ವ್ಯತಿರಿಕ್ತವಾದ ಬಲಿಷ್ಠ ಪ್ರತಿಪಕ್ಷದ ಅಗತ್ಯವಿದೆ ಎಂದು ನಿರ್ಮಲಾ ಸೀತಾರಾಮನ್ ನುಡಿದರು.
ಹತಾಶಗೊಂಡಿರುವ ಕಾಂಗ್ರೆಸ್ ಪಕ್ಷ ತಾನು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರ ನೈತಿಕತೆಯನ್ನು ಕುಗ್ಗಿಸುವ ವಿವಿಧ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಕರ್ನಾಟಕ, ಕೇರಳದಿಂದ ಮಹಾರಾಷ್ಟ್ರದ ವರೆಗೆ ಬಿಜೆಪಿ ನಾನಾಬಗೆಯ ಸವಾಲುಗಳನ್ನು ಎದುರಿಸುತಿದ್ದಾರೆ. ಅವರ ಕುತಂತ್ರಕ್ಕೆ ಮಣಿಯದೇ ಬಿಜೆಪಿ ಕಾರ್ಯಕರ್ತರು ಅವುಗಳನ್ನು ದಿಟ್ಟವಾಗಿ ಎದುರಿಸಬೇಕು ಎಂದರು.
ದೇಶದ ಆರ್ಥಿಕತೆ ಅತ್ಯಂತ ಬಲಿಷ್ಠ
ನರೇಂದ್ರ ಮೋದಿ ಸರಕಾರದಲ್ಲಿ ಹಣಕಾಸು ಸಚಿವೆಯಾಗಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಲವಾಗಿ ಸಮರ್ಥಿಸಿ ಕೊಂಡ ನಿರ್ಮಲಾ ಸೀತಾರಾಮನ್, ಜಾಗತಿಕವಾಗಿ ಆರ್ಥಿಕ ಅಸ್ಥಿರತೆಯ ನಡುವೆಯೂ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿದೆ. ದೇಶದ ಕೈಗಾರಿಕಾ ವಲಯದಲ್ಲಿ ಅಂತಾರಾಷ್ಟ್ರೀಯ ಬಂಡವಾಳ ಹರಿದುಬರುತ್ತಿದೆ ಎಂದರಲ್ಲದೇ ಇದಕ್ಕೆ ಸಿಐಐ, ವಿಶ್ವಬ್ಯಾಂಕ್‌ನ ವರದಿಗಳನ್ನು ಉದಾಹರಣೆಯಾಗಿ ನೀಡಿದರು.
ಕಳೆದೊಂದು ವರ್ಷದಲ್ಲಿ ದೇಶದಲ್ಲಿ ಬಂಡವಾಳ ಹೂಡಿಕೆಯಲ್ಲಿ ಶೇ.60ರಷ್ಟು ಹೆಚ್ಚಳವಾಗಿದೆ ಎಂದು ಕಾನ್ಪಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್‌ನ(ಸಿಐಐ) ಅಂಕಿಅಂಶಗಳನ್ನು ಉಲ್ಲೇಖಿಸಿದರು. 2025-26ನೇ ಸಾಲಿನಲ್ಲಿ ದೇಶದ ಜಿಡಿಪಿ ಶೇ.7.7ರಷ್ಟಿದ್ದು, ವಿಶ್ವದ ಅತ್ಯಂತ ವೇಗದ ಆರ್ಥಿಕ ಪ್ರಗತಿ ಹೊಂದಿರುವ ದೇಶಗಳ ಲ್ಲೊಂದೆನಿಸಿದೆ. ಉತ್ಪಾದನಾ ವಲಯ, ಸೇವಾ ವಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ದೇಶದ ಪ್ರಗತಿ ಆರೋಗ್ಯಪೂರ್ಣವಾಗಿದೆ ಎಂದು ಬಲವಾಗಿ ಸಮರ್ಥಿಸಿಕೊಂಡರು.
ದೇಶದ ಕೆಲವು ವಿರೋಧ ಪಕ್ಷದ ನಾಯಕರಿಗೆ ಈ ದೇಶದಲ್ಲಿ ಒಳ್ಳೆಯದು ಏನೂ ನಡೆಯುತ್ತಿರುವಂತೆ ಕಾಣಿಸುವು ದಿಲ್ಲ. ಆದರೆ ಆರ್ಥಿಕತೆಯ ಮಾನದಂಡಗಳೆಲ್ಲವೂ ಪ್ರಗತಿ ಹಾಗೂ ಸ್ಥಿರತೆಯತ್ತ ಬೊಟ್ಟು ಮಾಡುತ್ತಿವೆ ಎಂದವರು ಲೇವಡಿ ಮಾಡಿದರು.
‘ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ನೀತಿ ಆಯೋಗದ ಸಭೆಯಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಜೊತೆಗೆ ‘ಸಬ್ ಕಾ ಪ್ರಯಾಸ್’ ಘೋಷಣೆಯನ್ನು ನೀಡಿದ್ದಾರೆ. 2047ಕ್ಕೆ ಭಾರತ ಮುಂದುವರಿದ ದೇಶವಾಗಲು ದೇಶದ ಪ್ರತಿಯೊಬ್ಬ ಪ್ರಜೆಯ ಶ್ರಮದ ಅಗತ್ಯವನ್ನು ಇದು ಎತ್ತಿ ಹೇಳುತ್ತದೆ.’
-ನಿರ್ಮಲಾ ಸೀತಾರಾಮನ್, ಕೇಂದ್ರದ ಹಣಕಾಸು ಸಚಿವೆ.






