ಸಮಾಜದ ಕಡೆಯ ವ್ಯಕ್ತಿಗೂ ಪಿಎಂ ಸ್ವನಿಧಿ ಲಾಭ ತಲುಪಿಸಲು ಸಂಕಲ್ಪ : ರಾಮದಾಸ್

ಉಡುಪಿ, ನ.8: ಪ್ರಧಾನ ಮಂತ್ರಿಗಳ ‘ಪಿಎಂ ಸ್ವನಿಧಿ ಸೆ ಪಿಎಂ ಸಮೃದ್ಧಿ ತಕ್’ ಎಂಟು ಯೋಜನೆಗಳನ್ನು ಹೊಂದಿದ್ದು, ಇದನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸಿ ಅದರ ಲಾಭ ಪಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಹಾಗೂ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯ ರಾಜ್ಯ ಸಂಚಾಲಕ ಎ.ರಾಮದಾಸ್ ತಿಳಿಸಿದ್ದಾರೆ.
ಯೋಜನೆಯ ಅನುಷ್ಠಾನ ನಿಮಿತ್ತ ಇಂದು ಉಡುಪಿ ಜಿಲ್ಲೆಗೆ ಭೇಟಿ ನೀಡಿದ ರಾಮದಾಸ್, ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಯೋಜನೆಯ ವಿವರಗಳನ್ನು ತಿಳಿಸಿದರು.
ಯೋಜನೆಯನ್ನು ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಜಾರಿಗೊಳಿಸ ಲಾಗುತ್ತಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆ ಗಳನ್ನು ವಿಶ್ವಕರ್ಮ ಯೋಜನೆ ಹಾಗೂ ಪಿಎಂ ಸ್ವನಿಧಿ ಯೋಜನೆಗೆ ಆಯೆ ಮಾಡಲಾಗಿದೆ. ಈ ಎರಡು ಯೋಜನೆಗಳನ್ನು ಜೋಡಿಸಿಕೊಂಡು ತಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದಾಗಿ ತಿಳಿಸಿದರು.
ಯಾವುದೇ ಗ್ಯಾರಂಟಿ ಇಲ್ಲದೇ ನಗರ ಪ್ರದೇಶಗಳ ರಸ್ತೆಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ಬ್ಯಾಂಕುಗಳಿಗೆ 10,000ರೂ. ಸಾಲ ನೀಡುತ್ತವೆ. ಇದನ್ನು ತೀರಿಸಿದ ಬಳಿಕ ಒಂದೊಂದು ಹಂತಗಳಲ್ಲಿ 20,000ರೂ., 50,000ರೂ. ಹಾಗೂ 10 ಲಕ್ಷ ರೂ. ಸಾಲವನ್ನು ನೀಡುತ್ತವೆ. ಇದರ ಬಡ್ಡಿಯನ್ನು ಸರಕಾರವೇ ಭರಿಸಲಿದೆ ಎಂದರು.
ಇದುವರೆಗೆ ಈ ಯೋಜನೆಯಡಿ ದೇಶದಲ್ಲಿ 42.86 ಲಕ್ಷ ಮಂದಿ, ರಾಜ್ಯದಲ್ಲಿ 3.31 ಲಕ್ಷ ಮಂದಿ ಹಾಗೂ ಜಿಲ್ಲೆಯಲ್ಲಿ 7656 ಮಂದಿ ಫಲಾನುಭವಿಗಳಾಗಿದ್ದಾರೆ. ಇದರಲ್ಲಿ ಈವರೆಗೆ 9000 ಕೋಟಿ ರೂ.ಗಳನ್ನು ಬಂಡವಾಳದ ರೂಪದಲ್ಲಿ ವಿತರಿಸಲಾ ಗಿದೆ ಎಂದು ವಿವರಿಸಿದರು.
ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದ್ದರೆ, ಉಡುಪಿ ಜಿಲ್ಲೆ ದೇಶಕ್ಕೆ ಮೊದಲ ಸ್ಥಾನದಲ್ಲಿದ್ದು, ಇದೀಗ ಸ್ವಲ್ಪ ಹಿನ್ನಡೆ ಕಂಡಿದೆ. ರಾಜ್ಯ ಹಾಗೂ ಉಡುಪಿ ಜಿಲ್ಲೆ ಎರಡನ್ನೂ ಮತ್ತೆ ಮೊದಲ ಸ್ಥಾನಕ್ಕೆ ತರುವುದು ನಮ್ಮ ಗುರಿಯಾ ಗಿದೆ ಎಂದು ಎ.ರಾಮದಾಸ್ ತಿಳಿಸಿದರು.
ಈಗಾಗಲೇ ಕೇಂದ್ರ ಸರಕಾರ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ರಾಜ್ಯದ 311 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಯಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಯ ಅಧ್ಯಯನಕ್ಕಾಗಿ ಅಭಿಯಾನ ಕೈಗೊಳ್ಳಲು ಸುತ್ತೋಲೆ ಹೊರಡಿಸಿದೆ. ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಮನೆಮನೆಗೆ ಪತ್ರಿಕೆ ವಿತರಿಸುವ ವರು, ಹಾಲು ಹಾಗೂ ತರಕಾರಿ ವಿತರಕರು, ಆಹಾರ ಸರಬರಾಜು ಮಾಡುವವರು, ಕೇಟರಿಂಗ್‌ನವರು,ಟೈಲರಿಂಗ್ ವೃತ್ತಿಮಾಡುವವರನ್ನು ಯೋಜನೆಯಡಿ ತರುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಯೋಜನೆಯಡಿ ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕ ದೊಂದಿಗೆ ಆಯಾ ನಗರಾಡಳಿತ ಸಂಸ್ಥೆಯಲ್ಲಿ ನೊಂದಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಾಲಕ್ಕೆ ಆಯ್ಕೆಯಾದವರಿಗೆ ‘ಶಿಫಾರಸ್ಸು ಪತ್ರ’ವನ್ನು ಬ್ಯಾಂಕ್‌ಗಳಿಗೆ ಕಳುಹಿಸಿಕೊಡಲಾಗುತ್ತದೆ. ಬ್ಯಾಂಕ್‌ನವರು ಗ್ಯಾರಂಟಿ ಕೇಳದೇ 10,000ರೂ.ನಿಂದ ಪ್ರಾರಂಭಿಸಿ ಸಾಲ ನೀಡಲಿದ್ದು, ತೀರಿಸಿದ ಬಳಿಕ ಮುಂದಿನ ಹಂತದ ಮುದ್ರಾ ಪರಿವರ್ತಿತ ಸಾಲ ದೊರೆಯಲಿದೆ ಎಂದು ವಿವರಿಸಿದರು.
ಈ ಯೋಜನೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಅರ್ಹರು ಗರಿಷ್ಠ ಸಂಖ್ಯೆಯಲ್ಲಿ ಸಾಲ ಪಡೆಯುವಂತೆ ನೋಡಿಕೊ ಳ್ಳಬೇಕು. ಅಲ್ಲದೇ ಗರಿಷ್ಠ ಸಂಖ್ಯೆಯ ಪಲಾನುಭವಿಗಳ ನೊಂದಣಿಗೆ ಪಕ್ಷದ ಕಾರ್ಯಕರ್ತರು ತೊಡಗಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ ಅಲ್ಲದೇ ನಯನ ಗಣೇಶ್, ವೀಣಾ ಶೆಟ್ಟಿ, ಕುತ್ಯಾರು ನವೀನ್‌ಶೆಟ್ಟಿ, ರಾಘವೇಂದ್ರ ಕಿಣಿ, ಕಿಶೋರ್ ಕುಂದಾಪುರ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದಾವೂದ್ ಅಬೂಬಕ್ಕರ್ ಉಪಸ್ಥಿತರಿದ್ದರು.







