ಅಕ್ರಮ ವಿದೇಶಿ ವಲಸಿಗರಿಗೆ ರೆಸಾರ್ಟ್‌ನಲ್ಲಿ ಕೆಲಸ ಪ್ರಕರಣ: ಬಿಜೆಪಿಯ ಪೃಥ್ವಿರಾಜ್ ಶೆಟ್ಟಿ ಬಂಧನಕ್ಕೆ ಆಗ್ರಹಿಸಿ ಎಸ್ಪಿಗೆ ಮನವಿ

ಉಡುಪಿ: ರೆಸಾರ್ಟ್‌ನಲ್ಲಿ ಯಾವುದೇ ದಾಖಲೆಗಳಿಲ್ಲದ ವಿದೇಶಿಗರನ್ನು ಅಕ್ರಮವಾಗಿ ಕೆಲಸಕ್ಕೆ ಇಟ್ಟುಕೊಂಡು ದೇಶದ ಭದ್ರತೆಗೆ ಆತಂಕ ಒಡ್ಡಿರುವ ಹಾಗೂ ದೇಶದ್ರೋಹದ ಕಾರ್ಯ ಮಾಡಿರುವ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿಯನ್ನು ಕೂಡಲೇ ಬಂಧಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸೋಮವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರಿಗೆ ಮನವಿ ಸಲ್ಲಿಸಿತು.
ಯಾವುದೇ ದೇಶದ ಪ್ರಜೆಗಳು ಅಕ್ರಮವಾಗಿ ದೇಶದಲ್ಲಿ ವಾಸಿಸುವುದು ದೇಶದ ಆಂತರಿಕ ಭದ್ರತೆ ಮಾರಕವಾಗುವ ಸಾಧ್ಯತೆ ಇರುವುದರಿಂದ, ಇಂತಹವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ರೆಸಾರ್ಟ್/ಲಾಡ್ಜ್‌ಗಳು ಯಾವುದೇ ಮಾಹಿತಿಗಳಿಲ್ಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧವಾಗಿದೆ. ಆದುದರಿಂದ ಪೃಥ್ವಿರಾಜ್ ಶೆಟ್ಟಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿ, ಇದರ ಹಿಂದಿರುವ ಷಡ್ಯಂತ್ರ ಬಯಲಿಗೆ ಎಳೆಯಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಜಿಲ್ಲೆಯ ಯಾವುದೇ ರೆಸಾರ್ಟ್/ಲಾಡ್ಜ್‌ಗಳಲ್ಲಿ ಯಾವುದೇ ರೀತಿಯ ಅನೈತಿಕ/ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಉಡುಪಿ ಜಿಲ್ಲೆಯಲ್ಲಿ ರೆಸಾರ್ಟ್/ಲಾಡ್ಜ್‌ಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಟ್ಟುನಿಟ್ಟಿನ ಕ್ರಮ ತೆಗುದುಕೊಳ್ಳಬೇಕು ಎಂದು ನಿಯೋಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣ ಶೆಟ್ಟಿ, ಪ್ರಮುಖರಾದ ನವೀನ್ ಸಾಲಿಯಾನ್, ಮಮತಾ ನಾಯ್ಕ್, ಶಮಂತ್ ಕುಂದಾಪುರ, ಅಫ್ರಿದ್, ಪ್ರವೀಣ್ ಬಾರಕೂರು ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.







