ಶೋಷಿತರ ನೋವಿಗೆ ಸ್ಪಂದಿಸುವುದೇ ಅಂಬೇಡ್ಕರ್‌ಗೆ ಸಲ್ಲಿಸುವ ಗೌರವ: ಸುಂದರ್ ಮಾಸ್ತರ್

ಉಡುಪಿ: ಕಾಲಹರಣ ಮಾಡಿ ಮಾತನಾಡುವುದು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಶೋಷಿತರ, ಬಡವರ ನೋವಿಗೆ, ಕಷ್ಟಗಳಿಗೆ ಸ್ಪಂಧಿಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸುವ ಅತೀ ದೊಡ್ಡ ಗೌರವ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ರಾಜ್ಯ ಸಂಘಟನಾ ಸಂಚಾಲಕ ಸುಂದರ ಮಾಸ್ತರ್ ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ನಡೆದ ಬಾಬಾಸಾಹೇಬ್ ಅಂಬೇಡ್ಕರ್ ಅವರ 69ನೇ ಪರಿನಿಬ್ಬಾಣ ದಿನದ ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿ ಅವರು ಮಾತನಾಡುತಿದ್ದರು.
ಸಂಘಟನೆ ಕಟ್ಟಿ ಪ್ರಾಮಾಣಿಕ ಕೆಲಸ ಮಾಡಿ ಜನರ ವಿಶ್ವಾಸ ಗಳಿಸುವುದು ಮುಖ್ಯ. ಅದನ್ನು ನಾವು ಮಾಡಬೇಕು. ಶೋಷಿತರ ಕಷ್ಟಗಳಿಗೆ ಕೂಡಲೇ ಸ್ಪಂದಿಸಿದಾಗ ಜನರು ನಮ್ಮ ಮೇಲೇ ವಿಶ್ವಾಸ ಇಟ್ಟು ದಲಿತ ಚಳುವಳಿಗೆ ಕೈ ಜೋಡಿಸುತ್ತಾರೆ. ಇದರಿಂದ ಹಿಂದುತ್ವದ ಪ್ರಯೋಗ ಶಾಲೆಯಾದ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪೂರ್ಣಪ್ರಮಾಣದ ದಸಂಸ ಅಂಬೇಡ್ಕರ್ ವಾದ ಶಾಖೆಯನ್ನು ತೆರೆಯಲು ಸಾಧ್ಯವಾಗಿದೆ ಎಂದರು.
ದೇಶದಾದ್ಯಂತ ಪ್ರಗತಿಪರರು, ಜಾತ್ಯಾತೀತ ನಾಯಕರು, ದೇಶದ ಈ ಸ್ಥಿತಿಗೆ ಮತ್ತು ಸಂವಿಧಾನದ ಅಭದ್ರತೆಗೆ ಪ್ರತಿಕ್ರಿಯಿಸುತ್ತಿದ್ದಾರೆ.ಕರ್ನಾಟಕದಲ್ಲೂ ದಲಿತರು, ಶೋಷಿತರು ಆತಂಕಗೊಂಡಿದ್ದಾರೆ. ದೇಶವನ್ನು ಈ ದೀವಾಳಿ ಸ್ಥಿತಿಗೆ, ಸರ್ವಾಧಿಕಾರಿ ಧೋರಣೆಗೆ, ಬಹುತ್ವ ವಿರೋಧಿ ನೀತಿಗೆ ಎಳೆದುತಂದು ನಿಲ್ಲಿಸಿರುವ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ನೀತಿಯನ್ನು ವಿರೋಧಿಸುವುದನ್ನು ಬಿಟ್ಟು ಕೆಲವೊಂದು ಸ್ವಯಂಘೋಷಿತ ದಲಿತ ನಾಯಕರು ದಲಿತ ವಿರೋಧಿಗಳೊಂದಿಗೆ, ಸಂಘ ಪರಿವಾರದವರೊಂದಿಗೆ ಶಾಮೀಲಾಗಿರುವಂತೆ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದರು.
ಕಾರ್ಯಕ್ರಮದಲ್ಲಿ ದಸಂಸ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ ಗಿಳಿಯಾರು, ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ನಾಗೂರು, ಬ್ರಹ್ಮಾವರ ತಾಲೂಕು ಸಂಚಾಲಕ ಶ್ಯಾಮಸುಂದರ ತೆಕ್ಕಟ್ಟೆ, ಬೈಂದೂರು ತಾಲೂಕು ಸಂಚಾಲಕ ಶಿವರಾಜ್ ಬೈಂದೂರು, ಸಂಘಟನೆಯ ವಿವಿಧ ಪದಾಧಿಕಾರಿಗಳಾದ ಕುಮಾರ್ ಕೋಟ, ವಿಜಯ ಗಿಳಿಯಾರು, ಶ್ರೀನಿವಾಸ್ ವಡ್ಡರ್ಸೆ, ಹರೀಶ್ಚಂದ್ರ ಕೆ.ಡಿ., ಬಿರ್ತಿ ಸುರೇಶ, ಸುರೇಶ ಬಾರ್ಕೂರು, ಕೃಷ್ಣ ಎಲ್‌ಐಸಿ, ಪ್ರಕಾಶ್ ಹೇರೂರು, ದಿನೇಶ ಬಿರ್ತಿ, ಸುಧಾಮ ಹಂಗಾರಕಟ್ಟೆ, ಭಾಸ್ಕರ ಕೆರ್ಗಾಲ್, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾದ ರಾಘವೇಂದ್ರ ಸಾಸ್ತಾನ, ಗೋಪಾಲಕೃಷ್ಣ ಕುಂದಾಪುರ, ವಿಠಲ ಸಾಲೀಕೇರಿ ಮೊದಲಾದವರು ಉಪಸ್ಥಿತರಿದ್ದರು.







