ಕೋಡಿಯಲ್ಲಿ ರೀವರ್ ಕ್ರೂಸ್ ಪ್ರವಾಸೋದ್ಯಮ ಅಭಿವೃದ್ಧಿ: ಉಡುಪಿ ಡಿಸಿ ಸ್ವರೂಪ

ಉಡುಪಿ, ಆ.29: ಕುಂದಾಪುರ ತಾಲೂಕು ಕೋಡಿಯಲ್ಲಿ ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲಾಗುತಿದ್ದು, ಇದಕ್ಕಾಗಿ ಕಂದಾಯ ಇಲಾಖೆಯ ವಶದಲ್ಲಿರುವ 26.50 ಎಕರೆ ಜಾಗವನ್ನು ಪ್ರವಾಸೋದ್ಯಮ ಇಲಾಖೆಯ ಹೆಸರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.ತಿಳಿಸಿದ್ದಾರೆ.
ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಈಗಾಗಲೇ ಜಾಗಗಳನ್ನು ಗುರುತಿಸಿರುವ ಕುಂದಾಪುರದ ಕೋಡಿ ಬೀಚ್, ಕೋಡಿ ಕನ್ಯಾಣ ಬೀಚ್ ಹಾಗೂ ತ್ರಾಸಿ-ಮರವಂತೆ ಬೀಚ್‌ನ ಮಾಸ್ಟರ್ ಪ್ಲ್ಯಾನ್ ಅನ್ನು ಆಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ತಯಾರಿಸಬೇಕು. ಮಟ್ಟುವಿನಿಂದ ಪಡುಬಿದ್ರೆ ಕಡಲ ತೀರದ ವರೆಗೆ 10 ಕೋಟಿ ರೂ. ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದಕ್ಕೆ ಒತ್ತು ನೀಡಬೇಕು. ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಪ್ರವಾಸಿಗರಿಗೆ ಕ್ಷಿಪ್ರಗತಿಯಲ್ಲಿ ಮಾಹಿತಿ ದೊರಕಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಎಲ್ಲಾ ರೀತಿಯ ಮಾಹಿತಿಗಳನ್ನು, ಪ್ರವಾಸಿ ತಾಣಗಳ ಉತ್ತಮ ವೀಡಿಯೋ ಮತ್ತು ಛಾಯಾಚಿತ್ರಗಳನ್ನು ಅಪ್ಲೋಡ್ ಮಾಡುವಂತೆ ಅವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಡಲ ತೀರದ ಬೀಚ್‌ಗಳಲ್ಲಿ ಜಲಸಾಹಸ ಕ್ರೀಡಾ ಚಟುವಟಿಕೆ, ಅಡ್ವೆಂಚರ್ಸ್ ಗೇಮ್ಸ್ ಸೇರಿದಂತೆ ವಿವಿಧ ಚಟುವಟಿಕೆ ಗಳಿಗೆ ಬೀಚ್ ನಿರ್ವಹಣೆಗಳನ್ನು ನೀಡುವಾಗ ಪ್ರತಿಯೊಂದು ಚಟುವಟಿಕೆಗೂ ಟೆಂಡರ್ ಪ್ರಕ್ರಿಯೆ ನಡೆಸಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ನಿರ್ವಹಣೆಯನ್ನು ಗುತ್ತಿಗೆ ಪಡೆದಿರು ವವರು, ನಿರ್ವಹಣೆ ಒಪ್ಪಂದದಲ್ಲಿನ ಷರತ್ತು ಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿ ರುವ ಬಗ್ಗೆ ಗಮನಹರಿಸಬೇಕು. ಪ್ರವಾಸೋದ್ಯಮ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಠ್ಠಾನಗೊಳಿಸಲು ಅಗತ್ಯವಿರುವ ಯೋಜನೆಗಳನ್ನು ರೂಪಿಸಲು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವಂತೆ ಅವರು ತಿಳಿಸಿದರು.
ಜಿಲ್ಲೆಯ ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರಿಗೆ ಸ್ಥಳೀಯ ಕಡಲಿನ ಆಳ ಸೇರಿದಂತೆ ಸಮುದ್ರದ ಪ್ರಕ್ಷುಬ್ದ ವಾತಾವರಣದ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿಂದಾಗಿ ಅಪಘಾತಗಳ ಸುಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಈ ಹಿನ್ನೆಲೆಯಲ್ಲಿ ಬೀಚ್‌ಗಳಲ್ಲಿ ಸಾಕಷ್ಟು ಜೀವರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸುವುದು ಒಳ್ಳೆಯದು ಎಂದವರು ಸಲಹೆ ನೀಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್‌ಗೆ ರಾಜ್ಯದ ವಿವಿಧ ಕಡೆಗಳಿಂದ ಹೆಚ್ಚೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೀದಿದೀಪಗಳ ಸರಿಯಾದ ನಿರ್ವಹಣೆ ಮಾಡಬೇಕು. ಕೆಲವು ದಿನಗಳಿಂದ ಬೀದಿ ದೀಪಗಳ ನಿರ್ವಹಣೆ ಇಲ್ಲದೇ ಪ್ರವಾಸಿಗರರಿಗೆ ಅನಾನು ಕೂಲತೆ ಉಂಟಾಗುತ್ತಿದೆ. ಇದು ಪುನರಾರ್ವನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಕುಂದಾಪುರ ಕಿರಣ್‌ಕುಮಾರ್ ಕೊಡ್ಗಿ ಮಾತನಾಡಿ, ಸಮುದ್ರದ ಹಿನ್ನೀರಿನಲ್ಲಿಯೂ ಪ್ರವಾಸೋದ್ಯಮ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರಲ್ಲದೇ, ಅಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಲ್ಲಿ ಪ್ರವಾಸಿಗರಿಗೆ ಅನುಕೂಲವಾಗುತ್ತದೆ. ಇದಕ್ಕೆ ಒತ್ತು ನೀಡಬೇಕು. ಕುಂದಾಪುರ ಕೋಡಿ ಕನ್ಯಾನ ಹಾಗೂ ಬಬ್ಬುಕುದ್ರು ದ್ವೀಪದಲ್ಲಿ ಪ್ರವಾಸಿಗರಿಗೆ ಅನುಕೂಲ ವಾಗುವಂತೆ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಮಿಷನರ್ ರಶ್ಮಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ ಕೆ.ಜೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.
ಸ್ಕೂಬಾ ಡೈವಿಂಗ್‌ಗೆ ಅನುಮತಿ ಕೋರಿಕೆ
ಕಾಪು ತಾಲೂಕು ಮಟ್ಟು ಐಲ್ಯಾಂಡ್ ಬಳಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲು ಅನುಮತಿ ನೀಡುವಂತೆ ನವೀನ್‌ಕುಮಾರ್ ಎಂಬವರು ಮನವಿ ಸಲ್ಲಿಸಿದ್ದಾರೆ. ಅದೇ ರೀತಿ ಈಗ ಕಾಪು ಬೀಚಿನ ನಿರ್ವಹಣೆ ನಡೆಸುತ್ತಿರುವ ಸ್ವಚ್ಚಂ ಅಡ್ವೆಂಚರ್ಸ್ ಅವರು ಜೊತೆಗೆ ಸ್ಕೂಬಾ ಡೈವಿಂಗ್, ಫ್ಲೋಟಿಂಗ್ ಬ್ರಿಡ್ಜ್ ಹಾಗೂ ರೋಪ್‌ವೇ ಚಟುವಟಿಕೆ ನಡೆಸಲು ಅನುಮತಿಯನ್ನು ಕೋರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.







