ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ: ಚಾಲಕರಿಗೆ ಟೀ ಹೂವು ವಿತರಣೆ

ಉಡುಪಿ, ಜ.7: ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ -2026 ಅಂಗವಾಗಿ ಸಡಕ್ ಸುರಕ್ಷಾ ಜೀವನ್ ರಕ್ಷಾ ಎಂಬ ಘೋಷಣೆ ಅಡಿಯಲ್ಲಿ ಹಮ್ಮಿಕೊಳ್ಳಲಾಗಿರುವ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಬುಧವಾರ ಉಡುಪಿ ಸಂತೆಕಟ್ಟೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉಡುಪಿ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮನು ಪಾಟೀಲ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ., ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕ ತಿಮ್ಮಪ್ಪ ಗೌಡ, ಡಿಎಆರ್ ಪೊಲೀಸ್ ನಿರೀಕ್ಷಕ ರವಿಕುಮಾರ್, ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್, ಉಡುಪಿ ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳ ಪೊಲೀಸ್ ಉಪನೀರಿಕ್ಷಕರುಗಳು, ಸಾರ್ವಜನಿಕರು ವಾಹನ ಚಾಲಕರು ಲಾರಿಗಳ ಚಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು ಸಾರ್ವಜನಿಕರಿಗೆ ರಸ್ತೆ ನಿಯಮಗಳ ಕುರಿತು ಅರಿವು ಮೂಡಿಸಿದರು. ಏಳು ದಿನಗಳ ಕಾಲ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ದಿನದ 24 ಗಂಟೆಗಳ ಕಾಲ ಅರಿವೂ ಮೂಡಿಸಲಾಗುವುದು ಎಂದು ಎಸ್ಪಿ ತಿಳಿಸಿದರು.
ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ -66 ರಸ್ತೆಯಲ್ಲಿ ವಾಹನ ಚಾಲಕರುಗಳಿಗೆ ಚಹಾ ತಿಂಡಿ ಮತ್ತು ಹೂ ಗುಚ್ಚಗಳನ್ನು ನೀಡುವುದರ ಮೂಲಕ ಅವರಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವುದರ ಬಗ್ಗೆ ಮತ್ತು ವಾಹನ ಚಲಾಯಿ ಸುವ ಬಗ್ಗೆ ಮತ್ತು ಅಪಘಾತ ನಿಯಂತ್ರಿಸುವ ಬಗ್ಗೆ ಅರಿವು ಮೂಡಿಸಲಾಯಿತು.







