ರಸ್ತೆ ಸಂಚಾರ ಅಪಾಯಕಾರಿ: ತಡೆಬೇಲಿ ನಿರ್ಮಿಸಲು ಆಗ್ರಹ

ಉಡುಪಿ, ಮೇ 9: ನಗರಸಭೆ ವ್ಯಾಪ್ತಿಗೆ ಬರುವ 34ನೇ ಶಿರಿಬೀಡು ವಾರ್ಡ್‌ನಲ್ಲಿ ಪುಳಿಮಾರು ಜಂಕ್ಷನಿಂದ, ಪ್ರಗತಿನಗರ, ಹಾಗೂ ಹಳೆ ಸರಕಾರಿ ಬಸ್ಸು ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯು ಅಪಾಯ ಆಹ್ವಾನಿಸುವ ಸ್ಥಿತಿಯಲ್ಲಿದೆ.
ಕಿರಿದಾಗಿರುವ ರಸ್ತೆಯ ಅಂಚಿನಲ್ಲಿ ಮಳೆಗಾಲದ ನೀರು ಹರಿಯುವ ತೆರೆದ ಕಾಲುವೆ ಇದೆ. ರಸ್ತೆಯ ಅಂಚಿಗೆ ತಡೆಬೇಲಿ ಇಲ್ಲದೆ, ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ, ಪಾದಚಾರಿಗಳು ಆಯತಪ್ಪಿ ಕಾಲುವೆ ಪಾಲಾಗುವ ಅಪಾಯಗಳು ಇಲ್ಲಿ ಹೆಚ್ಚಾಗಿವೆ. ಈಗಾಗಲೆ ಕಾಲುವೆಗೆ ಸಾರ್ವಜನಿಕರು ಬಿದ್ದಿರುವ ಘಟನೆಗಳು ನಡೆದಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ಈ ರಸ್ತೆಯು ನಗರ ಪ್ರವೇಶಿಸಲು ಸಮೀಪದ ರಸ್ತೆಯಾಗಿರುವುದರಿಂದ, ಸಾರ್ವಜನಿಕರ ಸಂಚಾರ ಈ ರಸ್ತೆಯಲ್ಲಿ ಅಧಿಕವಾಗಿದೆ. ವಲಸೆ ಕಾರ್ಮಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸಂಚರಿಸುತ್ತಿರುತ್ತಾರೆ. ಜಿಲ್ಲಾಡಳಿತ, ನಗರಾಡಳಿತವು ತಕ್ಷಣವಾಗಿ ದುರಂತ ವಲಯದ ಸಮಸ್ಯೆಯನ್ನು ಪರಿಶೀಲಿಸಿ ಪರಿಹರಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.




