ತಂತ್ರಜ್ಞಾನಗಳಲ್ಲಿ ಭಾರತದ ಸ್ಥಾನ ಹೆಚ್ಚಿಸಲು ಇಂಜಿನಿಯರ್‌ಗಳ ಪಾತ್ರ ಮುಖ್ಯ: ಡಾ.ವಿದ್ಯಾಶಂಕರ್

ಉಡುಪಿ: ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಕಂಪ್ಯೂಟಿಂಗ್, ಬಯೋಟೆಕ್ ಮತ್ತು ಸೆಮಿಕಂಡಕ್ಟರ್‌ಗಳಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ನಿರಂತರ ಕಲಿಕೆಯ ಅಗತ್ಯವಾಗಿದೆ. ತಂತ್ರಜ್ಞಾನಗಳಲ್ಲಿ ಭಾರತದ ಸ್ಥಾನ ಮತ್ತು ವಿಕಸಿತ ಭಾರತ್‌ನ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಮುಖ್ಯ ಪಾತ್ರವಹಿಸಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ಎಸ್. ಹೇಳಿದ್ದಾರೆ.
ಅ.11ರಂದು ನಡೆದ ಬಂಟಕಲ್‌ನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಮಂಗಳೂರು ನಿವಿಯಸ್ ಸೊಲ್ಯೂಷನ್‌ನ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿ ಮಾತನಾಡಿ, ಅವಕಾಶಗಳನ್ನು ನೀರೀಕ್ಷಿಸುವ ಬದಲು ಹುಡುಕಬೇಕು. ಜೀವನದ ವೈಫಲ್ಯಗಳನ್ನು ಸವಾಲಾಗಿ ಸ್ವೀಕರಿಸಿ ಆತ್ಮ ವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಮಾತನಾಡಿ, ಸಕಾರಾತ್ಮಕ ಅಂಶಗಳ ಮೇಲೆ ಗಮನ ಕೇಂದ್ರಿಕರಿಸಿ, ಸವಾಲುಗಳನ್ನು ಸ್ವೀಕರಿಸಿ ಉತ್ತಮ ಮನಸ್ಥಿತಿಯೊಂದಿಗೆ ಶ್ರೇಷ್ಠ ವ್ಯಕ್ತತ್ವವನ್ನು ಮೈಗೂಡಿಸಿಕೊಳ್ಳಬೇಕು. ಹಾಗೆಯೇ ವಿದ್ಯಾರ್ಥಿಗಳು ತಮ್ಮ ಪೋಷಕರ ಮತ್ತು ಶಿಕ್ಷಕರ ಕೊಡುಗೆಗಳನ್ನು ಗೌರವಿಸಬೇಕು ಎಂದು ಹೇಳಿದರು.
ಸೋದೆ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್.ಐತಾಳ್, ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ 2024-25ನೇ ಸಾಲಿನಲ್ಲಿ 3ನೇ ರ್ಯಾಂಕ್ ಪಡೆದ ಪ್ರಥಮ್ ಎಲ್.ಕಾಮತ್ ಮತ್ತು ಆರನೇ ರ್ಯಾಂಕ್ ಪಡೆದ ನಿಧಿ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಮಂಗಳೂರಿನ ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್ ಇವರಿಂದ ಪ್ರಾಯೋಜಿತ ವಾದ ಚಿನ್ನದ ಪದಕಗಳನ್ನು ಸ್ವಾಮೀಜಿ ಪ್ರಥಮ್ ಎಲ್.ಕಾಮತ್, ಸಮೀಕ್ಷಾ ನಾಯಕ್, ವಿನಯ್ ಕುಮಾರ್, ಶ್ರೀಲಕ್ಷ್ಮಿ ಕಾಮತ್, ಚೈತನ್ಯ, ಭಾರ್ಗವಿ ಅವರ ಶೈಕ್ಷಣಿಕ ಸಾಧನೆಗಾಗಿ ನೀಡಿದರು. ಕಾಲೇಜಿನ ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದ ಡಾ. ಅಶ್ವಿನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಆಡಳಿತ ಮಂಡಳಿಯ ಸದಸ್ಯ ಹರೀಶ್ ಬೆಳ್ಮಣ್, ಡೀನ್‌ಗಳಾದ ಡಾ. ಸುದರ್ಶನ್ ರಾವ್, ಡಾ.ನಾಗರಾಜ್ ಭಟ್, ಡಾ.ಸಚಿನ್ ಭಟ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಡಾ.ನಾಗರಾಜ್ ಭಟ್ ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರ ಎಚ್.ಜೆ. ವಂದಿಸಿದರು. ಪ್ರಾಧ್ಯಾಪಕ ಸೌಮ್ಯ ಭಟ್ ಮತ್ತು ರಾಘವೇಂದ್ರ ಜಿ.ಎಸ್. ಕಾರ್ಯಕ್ರಮ ನಿರೂಪಿಸಿದರು.







