ರೋಶನಿ ಶೆಟ್ಟಿಗೆ ‘ಇಂದಿರಾ ಪ್ರಿಯದರ್ಶಿನಿ’ ಪ್ರಶಸ್ತಿ ಪ್ರದಾನ

ಉಡುಪಿ: ಭಾರತದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ 108ನೇ ಜನ್ಮದಿನಾಚರಣೆಯನ್ನು ಇಂದು ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್, ಉಡುಪಿ ಬ್ಲಾಕ್ ಕಾಂಗ್ರೆಸ್ ಮತ್ತು ಉಡುಪಿ ಮಹಿಳಾ ಕಾಂಗ್ರೆಸ್‌ನ ಸಹಯೋಗದೊಂದಿಗೆ ನಡೆಸಲಾಯಿತು.
ಇಂದಿರಾ ಗಾಂಧಿಯವರ ನೆನಪಿನಲ್ಲಿ, ಮಹಿಳಾ ಮತ್ತು ಮಕ್ಕಳ ಮಕ್ಕಳ ಅಭಿವೃದ್ಧಿಗೆ ಶ್ರಮಿಸಿದ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರೋಶನಿ ಶೆಟ್ಟಿ ಅಂಪಾರು ಇವರಿಗೆ ‘ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಎಂ.ಎ. ಗಫೂರ್ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಇಂದಿರಾಗಾಂಧಿ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ ಅವರು ಇಂದಿರಾಗಾಂಧಿ ಅವರ ತ್ಯಾಗ ಮತ್ತು ಬಲಿದಾನದ ಬಗ್ಗೆ ಮಾತನಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ಇದೇ ಸಂದರ್ಭದಲ್ಲಿ ನೀಡಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಪದಾಧಿಕಾರಿಗಳಿಗೆ ಶುಭಹಾರೈಸಿದರು. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ಪುಷ್ಪನಮನ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್‌ರಾಜ್ ಕಾಂಚನ್, ರಮೇಶ್ ಕಾಂಚನ್ ಅವರು ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ 20 ಅಂಶದ ಕಾರ್ಯಕ್ರಮ ಮತ್ತು ಅವರ ಜೀವನದ ಸಾಧನೆಗಳ ಬಗ್ಗೆ ಮಾತನಾಡಿದರು.
ಸರಳಾ ಕಾಂಚನ್, ಗೀತಾ ವಾಗ್ಲೆ, ಸರಸು ಬಂಗೇರ, ಲಕ್ಷ್ಮಿ ಭಟ್, ಮೀನಾಕ್ಷಿ ಮಾಧವ, ಮಾಲಿನಿ ರೈ, ಚಂದ್ರಿಕಾ ಶೆಟ್ಟಿ, ಶಾಂತಲತಾ ಶೆಟ್ಟಿ, ರೇಖಾ ಸುವರ್ಣ, ಅನಿತಾ ಪೂಜಾರಿ, ಸಂಧ್ಯಾ ತಿಲಕ್‌ರಾಜ್, ಮಮತಾ ಶೆಟ್ಟಿ, ಇಂಟಕ್ ಜಿಲ್ಲಾ ಅಧ್ಯಕ್ಷ ಕಿರಣ್ ಹೆಗ್ಡೆ, ಸೇವಾದಳದ ಕಿಶೋರ್ ಕುಮಾರ್ ಎರ್ಮಾಳು, ಜಯಕುಮಾರ್, ಶಶೀಧರ ಶೆಟ್ಟಿ ಎಲ್ಲೂರು, ಡಾ ಸುನೀತಾ ಶೆಟ್ಟಿ, ರೋಶನಿ ಒಲಿವವೆರಾ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಸ್ವಾಗತಿಸಿ, ಪ್ರಸ್ತಾವನೆಯ ಮಾತು ಆಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಗೋಪಿ ನಾಯ್ಕ ಮತ್ತು ಪ್ರಧಾನ ಕಾರ್ಯದರ್ಶಿ ಪುಷ್ಪಅಂಚನ್ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಶೆಟ್ಟಿ ವಂದಿಸಿದರು.







