ಬೈಂದೂರಿನ ಕೊರಗರ ಪ್ರದೇಶಗಳ ಅಭಿವೃದ್ಧಿಗೆ 4.39 ಕೋಟಿ ರೂ. ಅನುದಾನ ಮಂಜೂರು
ಬೈಂದೂರು : ಕೇಂದ್ರ ಸರಕಾರದ ಪಿಎಂ ಜನ್‌ಮನ್ (ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ) ಯೋಜನೆಯಡಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಸುಧಾರಣೆ ನಿಟ್ಟಿನಲ್ಲಿ ಹೊಸ ಅಭಿಯಾನವನ್ನು ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕೊರಗ ಮತ್ತು ಜೇನು ಕುರುಬ ಸಮುದಾಯಗಳು ಯೋಜನೆ ವ್ಯಾಪ್ತಿಯಲ್ಲಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿರುವ ಕೊರಗ ಸಮುದಾಯ ವಾಸವಾಗಿರುವ ಪ್ರದೇಶಗಳ ಅಭಿವೃದ್ಧಿಗೆ 4.39 ಕೋಟಿ ರೂ. ಅನುದಾನ ಮಂಜೂರಾಗಿದೆ.
ಈ ನಿಟ್ಟಿನಲ್ಲಿ 2024ರಲ್ಲಿ ನಡೆಸಿದ ಸಮೀಕ್ಷೆಯನುಸಾರ ವಂಡ್ಸೆ, ಹರ್ಕೂರು, ಇಡೂರು ಭಾಗದ ಕೊರಗ ಸಮುದಾಯದ ಮನೆಗಳು ಇರುವ ಪ್ರದೇಶಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ 4.39 ಕೋಟಿ ರೂ. ಅನುದಾನ ಕೇಂದ್ರ ಸರಕಾರದಿಂದ ಮಂಜೂರುಗೊಂಡಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಹಾಗೂ ಸಂಸದ ಬಿ.ವೈ ರಾಘವೇಂದ್ರ ಇವರಿಗೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಕೃತಜ್ಞತೆ ಸಲ್ಲಿಸಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





