ಮಲ್ಪೆ ಬಂದರಿನ ಸಮಗ್ರ ಅಭಿವೃದ್ಧಿಗೆ 850 ಕೋಟಿ ರೂ. ಪ್ರಸ್ತಾಪ: ಸಚಿವ ಮಂಕಾಳ ಎಸ್.ವೈದ್ಯ

ಮಲ್ಪೆ, ಅ.8: ದೇಶದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕಾ ಬಂದರಿನ ಸಮಗ್ರ ಅಭಿವೃದ್ಧಿಗಾಗಿ 850 ಕೋಟಿ ರೂ.ಗಳ ಯೋಜನೆಯ ಪ್ರಸ್ತಾಪವೊಂದನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದೇವೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳ ಎಸ್.ವೈದ್ಯ ಹೇಳಿದ್ದಾರೆ.
ಜಿಲ್ಲಾ ಮೀನುಗಾರಿಕಾ ಇಲಾಖೆಯ ವತಿಯಿಂದ ಕೇಂದ್ರ ಪುರಸ್ಕೃತ ಪಿಎಂಎಂಎಸ್‌ವೈ ಯೋಜನೆಯಡಿ 12.5 ಕೋಟಿ ರೂ.ವೆಚ್ಚದಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಗೆ ಬುಧವಾರ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡುತಿದ್ದರು.
ಸಿಆರ್‌ಝಡ್ ಹಾಗೂ ಇತರ ಸಮಸ್ಯೆಗಳಿಂದಾಗಿ ಕೇಂದ್ರ ಸರಕಾರದ ಸುಮಾರು 2000 ಕೋಟಿ ರೂ.ಗಳಿಗೂ ಅಧಿಕ ಅನುದಾನ ಕಾರ್ಯರೂಪಕ್ಕೆ ಬರದೇ ಮರಳಿಹೋಗಿದೆ. ಕೇರಳ ಹಾಗೂ ಗೋವಾಗಳಲ್ಲಿ ನೀಡಿರುವಂತೆ ಕರ್ನಾಟಕದಲ್ಲೂ ಸಿಆರ್‌ಝಡ್ ಕಾನೂನಿನಲ್ಲಿ ವಿನಾಯಿತಿಗಳನ್ನು ನೀಡುವ ಮೂಲಕ ಇಲ್ಲೂ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ಮಾಡಿಕೊಡಬೇಕು. ದೇಶದಲ್ಲಿ ಎಲ್ಲಾ ರಾಜ್ಯಗಳಲ್ಲಿ ಒಂದೇ ರೀತಿಯ ನಿಯಮಾವಳಿಗಳು ಇರುವುದು ಒಳಿತು ಎಂದು ಅವರು ಕೇಂದ್ರ ಸರಕಾರಕ್ಕೆ ಮನವಿ ಮಾಡಿದರು.
ಮೀನುಗಾರರ ಯೋಜನೆ ಹಾಗೂ ಮೀನುಗಾರಿಕಾ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ಕೈಗೊಳ್ಳಲು ಅಗತ್ಯವಿರುವ ಮೂಲ ಸೌಕರ್ಯಗಳಿಗೆ ಬೇಕಾದ ಎಲ್ಲಾ ನೆರವು ನೀಡಲು ರಾಜ್ಯ ಸರಕಾರ ಸಿದ್ಧವಿದೆ. ಇದಕ್ಕೆ ಅಗತ್ಯ ವಿರುವ ಎಲ್ಲ ರೀತಿಯ ಅನುದಾನವನ್ನು ಸರಕಾರ ಕಲ್ಪಿಸಿಕೊಡಲಿದೆ ಎಂದವರು ಹೇಳಿದರು.
ಮಲ್ಪೆ ಮೀನುಗಾರಿಕಾ ಬಂದರು 50,000ಕ್ಕೂ ಅಧಿಕ ಮಂದಿ ಕಾರ್ಮಿಕರಿಗೆ ಉದ್ಯೋಗವನ್ನು ನೀಡಿದೆ. ಇದರಲ್ಲಿ ನನ್ನ ಕ್ಷೇತ್ರವಾದ ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯವರೇ 20ಸಾವಿರ ಮಂದಿಗೂ ಅಧಿಕವಿದ್ದಾರೆ. ಇವರೆಲ್ಲರಿಗೂ ಅಗತ್ಯ ಸೌಲಭ್ಯ ಹಾಗೂ ಮೀನುಗಾರಿಕಾ ಚಟುವಟಿಕೆ ಕೈಗೊಳ್ಳಲು ಬೇಕಾದ ಸೌಕರ್ಯ ಒದಗಿಸಲು ರಾಜ್ಯ ಸರಕಾರ ಬದ್ಧವಿದೆ. ಎಲ್ಲರೂ ಸೇರಿ ಅಭಿವೃದ್ದಿ ಕಾರ್ಯಗಳನ್ನು ಮಾಡಬೇಕಿದೆ ಎಂದು ಮಂಕಾಳ ವೈದ್ಯ ಹೇಳಿದರು.
ರಾಜ್ಯ ಸರಕಾರ ರಾಜ್ಯದಲ್ಲಿರುವ ಸಿಆರ್‌ಝಡ್ ನಿಯಮಾವಳಿಗಳನ್ನು ಬದಲಾಯಿಸಲು ಮುಂದಾಗಿದೆ. ಕರಾವಳಿ ತೀರದ ಯಾವುದೇ ಯೋಜನೆಗಳಿಗೆ 30 ದಿನದೊಳಗೆ ಸಿಆರ್‌ಝಡ್ ಅನುಮೋದನೆ ನೀಡಲು ಇದರಿಂದ ಸಾಧ್ಯವಾ ಗಲಿದೆ. ಇದಕ್ಕೆ ಎಲ್ಲರೂ ಸ್ಪಂದಿಸಬೇಕು ಇದರಿಂದ ಕರಾವಳಿ ತೀರದಲ್ಲಿ ಮೀನುಗಾರಿಕಾ ಚಟುವಟಿಕೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದರು.
ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಇಂದು ಶಿಲಾನ್ಯಾಸ ನೆರವೇರಿಸಿರುವ 12.50 ಕೋಟಿ ರೂ. ವೆಚ್ಚದ ಬಂದರಿನ ಆಧುನೀಕರಣ ಕಾಮಗಾರಿಯಲ್ಲಿ 60,000 ಲೀ. ಸಾಮರ್ಥ್ಯದ ಸಂಪ್‌ಟಾಯಂಕ್, 1.25 ಲಕ್ಷ ಲೀ. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಸಿಸಿಟಿವಿ ಅಳವಡಿಕೆ, ಕಾಂಕ್ರಿಟ್ ಚರಂಡಿ ನಿರ್ಮಾಣ ಸೇರಿ ವಿವಿಧ ಕಾಮಗಾರಿಗಳು ನಡೆಯಲಿವೆ ಎಂದರು.
ಮಲ್ಪೆಯಲ್ಲಿ ಮೀನುಗಾರಿಕಾ ಬೋಟುಗಳ ಸಂಖ್ಯೆ ಹೆಚ್ಚಿರುವುದರಿಂದ ಹೊರವಲಯದಲ್ಲಿ ಬಂದರಿನ ಮೂರನೇ ಹಂತದ ವಿಸ್ತರಣೆ ನಡೆಯಬೇಕಿದೆ. ಜೊತೆಗೆ ಬಂದರಿನ ಸ್ವಚ್ಚತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡಬೇಕು. ಸಚಿವರು ಸ್ಥಳೀಯ ಮೀನುಗಾರರೊಂದಿಗೆ ಅವರ ಸಮಸ್ಯೆಗಳ ಕುರಿತು ಚರ್ಚಿಸಲು ದಿನ ನಿಗದಿ ಪಡಿಸಬೇಕು ಎಂದು ಮನವಿ ಮಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಮತ್ಸ್ಯ ಸಂಪದ ಯೋಜನೆಯಡಿ ಜಿಲ್ಲೆಯಲ್ಲಿ 21ರಿಂದ 24 ಯೋಜನಾ ಪ್ರಸ್ತಾಪ ಕೇಂದ್ರಕ್ಕೆ ಹೋಗಿತ್ತು. ಇವುಗಳಲ್ಲಿ 5-6 ಯೋಜನೆ ಬಿಟ್ಟರೆ ಬೇರೆ ಯಾವುದೂ ಕಾರ್ಯಗತ ಗೊಂಡಿಲ್ಲ. ಇದಕ್ಕೆ ಇಲ್ಲಿನ ಸಿಆರ್‌ಝಡ್ ಸಮಸ್ಯೆಯೇ ಕಾರಣ. ಮತ್ಸ್ಯ ಸಂಪದ ಯೋಜನೆಯಡಿ 1,000ಕೋಟಿ ರೂ. ಅನುದಾನ ಸಿಗಲಿದ್ದು, ಈ ಅನುದಾನ ಸಮರ್ಪಕವಾಗಿ ಬಳಕೆಯಾದರೆ ಮೀನುಗಾರರ ಅಭಿವೃದ್ಧಿ ಸಾಧ್ಯವಾ ಗಲಿದೆ. ಹೆಜಮಾಡಿ ಮೀನುಗಾರಿಕಾ ಬಂದರಿನ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಇದೆ.ಜಿಲ್ಲೆಯಲ್ಲಿ ಜಟ್ಟಿಗಳ ನಿರ್ಮಾಣ ಹಾಗೂ ಹೂಳೆತ್ತುವುದಕ್ಕೂ ಹೆಚ್ಚು ಗಮನ ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮೀನುಗಾರಿಕಾ ಅಪರ ನಿರ್ದೇಶಕ ಸಿದ್ದಯ್ಯ ಡಿ, ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ ಉಪಸ್ಥಿತರಿದ್ದರು.
ಬೆಂಗಳೂರಿನ ಮೀನುಗಾರಿಕಾ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಸ್ವಾಗತಿಸಿದರೆ, ರವಿ ಕೆ.ಬಂಗೇರ ಕಾರ್ಯಕ್ರಮ ನಿರೂಪಿಸಿದರು.







