ಆರೆಸ್ಸೆಸ್‌ನಿಂದ ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆ ಬುಡಮೇಲು : ಸುಂದರ್ ಮಾಸ್ತರ್

ಬ್ರಹ್ಮಾವರ, ನ.23: ಆರೆಸ್ಸೆಸ್ ಮತ್ತು ಕೇಂದ್ರ ಸರಕಾರ ಇಡೀ ದೇಶದ ಆರ್ಥಿಕ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದೆ. ದೇಶದಲ್ಲಿ ಅಂಬೇಡ್ಕರ್ ವಿಚಾರಧಾರೆಗಳು, ಚಳುವಳಿ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಘಟನೆಗಳಿರುವಾಗ ಮನುವಾದಿಗಳಿಗೆ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ. ದಲಿತರು, ಅಲ್ಪಸಂಖ್ಯಾತರು, ಶೋಷಿತರು ಒಟ್ಟಾದಾಗ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ. ಆ ಮೂಲಕ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಬೇಕು ಎಂದು ಕರ್ನಾಟಕ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಹೇಳಿದ್ದಾರೆ.
ಬ್ರಹ್ಮಾವರದ ಆಶ್ರಯ ಹೋಟೆಲ್ ಸಭಾಭವನದಲ್ಲಿ ರವಿವಾರ ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ಬ್ರಹ್ಮಾವರ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಶೋಷಿತ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಶೋಷಿತರ ಸಮಸ್ಯೆ ಬಗೆಹರಿಸಲು ವಿವಿಧ ಮಾದರಿಯ ಚಳುವಳಿಗಳು ನಡೆದಿವೆ. ಕಳೆದ 10 ವರ್ಷಗಳನ್ನು ಅವಲೋಕಿಸಿದರೆ ದೇಶದಲ್ಲಿ ಸರ್ವಾಧಿಕಾರಿ ಧೋರಣೆಯ ರಾಜಕಾರಣ, ಜನವಿರೋಧಿ ಸರಕಾರವಿದೆ. ಬೆಲೆ ಏರಿಕೆ, ಶೋಷಣೆ, ದೌರ್ಜನ್ಯ ಕಡಿಮೆ ಆಗಿಲ್ಲದ ಪರಿಸ್ಥಿತಿಯಲ್ಲೂ ಜನರು, ಸಮುದಾಯಗಳು ಸರ್ವಾಧಿಕಾರಕ್ಕೆ ಮಾನ್ಯತೆ ಕೊಡುತ್ತಿರುವುದು ದುರಂತ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಎಲ್ಲರೂ ಒಂದಾಗಿ ಪ್ರೀತಿ, ಸಹಬಾಳ್ವೆಯಿಂದ ಬದುಕಲು ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಸಂವಿಧಾನ, ಪ್ರಜಾಪ್ರಭುತ್ವವನ್ನು ಅಲುಗಾಡಿಸುವ ಹುನ್ನಾರ ತಡೆಯಲು ಸಂಘಟಿತ ಚಳುವಳಿಯಿಂದ ಮಾತ್ರ ಸಾಧ್ಯ. ದಸಂಸ ಸಂಘಟನೆ ಹೋರಾಟಗಳ ಮೂಲಕ ಧ್ವನಿಯಿಲ್ಲದವರ ಧ್ವನಿಯಾಗುತ್ತಿದೆ. ಯುವಕರು ಸಂಘಟಿತರಾಗಿ ಸನ್ಮಾರ್ಗದಲ್ಲಿ ನಡೆದಾಗ ಸಮಸಮಾಜ ನಿರ್ಮಾಣ ವಾಗುತ್ತದೆ ಎಂದು ಹೇಳಿದರು.
ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಮಂಜುನಾಥ ಗಿಳಿಯಾರು ಮಾತನಾಡಿ, ಹಿಂದಿನವರು ಕಟ್ಟಿಕೊಟ್ಟ ಚಳುವಳಿಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ನಮ್ಮ ದಸಂಸ ಸಂಘಟನೆ ಮಾಡುತ್ತಿದ್ದು, ಜಿಲ್ಲೆಯ ಏಳು ತಾಲೂಕಿನಲ್ಲಿ ಸಂಘಟನೆ ಸಕ್ರೀಯವಾಗಿ ಕೆಲಸ ಮಾಡುತ್ತಾ ನೊಂದವರ ದನಿಯಾಗಿದೆ. ಸಮಸಮಾಜದ ಗುರಿಯೊಂದಿಗೆ ಸಮರ್ಪಣಾ ಮನೋಭಾವನೆಯೊಂದಿಗೆ ಸಾಗುತ್ತಿರುವ ಹೋರಾಟದ ರಥವನ್ನು ಗ್ರಾಮಗ್ರಾಮಗಳಿಗೂ ವಿಸ್ತರಿಸಲಾಗುತ್ತದೆ ಎಂದರು.
ಕರ್ನಾಟಕ ದಸಂಸ ಬ್ರಹ್ಮಾವರದ ನಿಯೋಜಿತ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಇದೇ ಸಂದರ್ಭದಲ್ಲಿ ಹಿರಿಯ ದಲಿತ ಪರ ಹೋರಾಟಗಾರರು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.
ಉದ್ಯಮಿಗಳಾದ ಪ್ರಸಾದ್ರಾಜ್ ಕಾಂಚನ್, ಎಸ್.ನಾರಾಯಣ್, ಕ್ರೈಸ್ತ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್, ಕರ್ನಾಟಕ ದಸಂಸ ಅಂಬೇಡ್ಕರ್ ವಾದ ಇದರ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಅಣ್ಣಪ್ಪ ನಕ್ರೆ, ಮಂಜುನಾಥ ನಾಗೂರು, ಸುರೇಶ್ ಹಕ್ಲಾಡಿ, ಅಣ್ಣಪ್ಪ ಮಾರ್ಸ್ತ ಹೆಬ್ರಿ, ಜಿಲ್ಲಾ ಕೋಶಾಧಿಕಾರಿ ಭಾಸ್ಕರ್ ನಿಟ್ಟೂರು, ಜಿಲ್ಲಾ ಸಮಿತಿ ಸದಸ್ಯ ಕುರ್ಮಾ ಕೋಟ, ಕುಂದಾಪುರ ತಾಲೂಕು ಸಂಚಾಲಕ ಕೆ.ಸಿ.ರಾಜು ಬೆಟ್ಟಿನಮನೆ, ಬೈಂದೂರು ತಾ. ಸಂಚಾಲಕ ಶಿವರಾಜ್, ಕಾರ್ಕಳ ತಾಲೂಕು ಸಂಚಾಲಕ ರಾಘವ ಕುಕ್ಕುಜೆ, ಉಡುಪಿ ತಾಲೂಕು ಸಂಚಾಲಕ ಶಂಕರದಾಸ್ ಚೇಂಡ್ಕಳ, ಹೆಬ್ರಿ ಸಂಚಾಲಕ ದೇವು ಹೆಬ್ರಿ, ಕಾಪು ಸಂಚಾಲಕ ರಾಜೇಂದ್ರನಾಥ್, ಜಿಲ್ಲಾ ಮಹಿಳಾ ಒಕ್ಕೂಟದ ಗೀತಾ ಸುರೇಶ್ ಕುಮಾರ್, ವಸಂತಿ ಶಿವಾನಂದ್ ಮೊದಲಾದವರು ಉಪಸ್ಥಿತರಿದ್ದರು.
ಶಂಕರದಾಸ್, ಮಂಜುನಾಥ್ ಬಾಳ್ಕುದ್ರು ಹೋರಾಟಗೀತೆ ಹಾಡಿದರು. ಸದಾನಂದ ಹಂಗಾರಕಟ್ಟೆ, ಶರತ್ ಆರೂರು ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಮಾಸ್ತರ್ ಗುಜ್ಜರಬೆಟ್ಟು ವಂದಿಸಿದರು.
ನ.26ರಿಂದ ದಸಂಸ ಸದಸ್ಯತ್ವ ಅಭಿಯಾನ
ಬೇರೆಬೇರೆ ಸಂಘಟನೆಗಳ ಹೆಸರಿನಲ್ಲಿ ಜನರ ಭಾವನೆಗಳನ್ನು ಕೆರಳಿಸಿ ಭಯೋತ್ಪಾದನೆಯ ರೀತಿ ಕೆಲಸ ಮಾಡುವರ ವಿರುದ್ಧ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕು ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ತಿಳಿಸಿದರು.
ಸಂಘ ಪರಿವಾರ ಹೇಳುವ ನಕಲಿ ಹಿಂದುತ್ವವನ್ನು ನಂಬಬಾರದು. ದೇಶದಲ್ಲಿ ಮನುವಾದವನ್ನು ಅಳವಡಿಸಲು ಹುನ್ನಾರ ಮಾಡುತ್ತಿರುವವರ ವಿರುದ್ಧ ಹೊಸದೊಂದು ಚಳುವಳಿ ಕಟ್ಟುವ ಚಿಂತನೆಯಿದೆ. ಈ ನಿಟ್ಟಿನಲ್ಲಿ ದಸಂಸ ಅಂಬೇಡ್ಕರ್ ವಾದ ಸಂಘಟನೆಯು ಸದಸ್ಯತ್ವ ಅಭಿಯಾನವನ್ನು ನ.26 ಸಂವಿಧಾನ ಸಮರ್ಪಣಾ ದಿನದಂದು ಆರಂಭಿಸಲಿದ್ದು, 2 ತಿಂಗಳ ಕಾಲ ನಡೆಯಲಿದೆ ಎಂದರು.







