ಸಹಕಾರಿ ಸಂಸ್ಥೆಗಳ ಮೇಲೆ ಗ್ರಾಮೀಣ ಜನರಿಗೆ ವಿಶ್ವಾಸ: ದೇವಿಪ್ರಸಾದ್ ಶೆಟ್ಟಿ

ಉಡುಪಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹದ 5ನೇ ದಿನದ ಕಾರ್ಯಕ್ರಮವು ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ಕುಕ್ಕಿಕಟ್ಟೆ ಸಹಯೋಗದೊಂದಿಗೆ ಅಲೆವೂರಿನ ಸಮೃದ್ಧಿ ಸಹಕಾರ ಸೌಧದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮೀಣ ಜನರು ಸಹಕಾರಿ ಸಂಸ್ಥೆಗಳ ಮೇಲೆ ವಿಶ್ವಾಸವಿಟ್ಟಿರುವುದರಿಂದ ಸಹಕಾರಿ ಸಪ್ತಾಹವು ಉತ್ಸಾಹದ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಸಹಕಾರ ಸಂಘಗಳ ಉಪನಿಬಂಧಕ ಲಾವಣ್ಯ ಕೆ.ಆರ್., ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ಸುಧೀರ್ ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರುಗಳಾದ ಎಚ್.ಗಂಗಾಧರ ಶೆಟ್ಟಿ, ಶ್ರೀಧರ ಪಿ.ಎಸ್., ಸುಧೀರ್ ವೈ. ಉಪಸ್ಥಿತರಿದ್ದರು.
ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಶ್ರೀಧರ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ಅಲೆವೂರು ಶ್ರೀಧರ್ ಶೆಟ್ಟಿ ಮತ್ತು ಅಲೆವೂರು ಗಣಪತಿ ಕಿಣಿ, ಸಾಧಕ ಕೃಷಿಕ ಸುಬ್ರಾಯ ಕಾಮತ್, ಪ್ರಗತಿಪರ ಹೈನುಗಾರ ರಾಕೇಶ್ ರೈ, ಹಿರಿಯ ನೇಕಾರ ಸಂಜೀವ ಶೆಟ್ಟಿಗಾರ್, ಗೃಹ ಉತ್ಪನ್ನಗಳ ಸ್ವ ಉದ್ಯೋಗ ಸಾಧಕಿ ನಿರ್ಮಲ ಅವರನ್ನು ಸನ್ಮಾನಿಸಲಾಯಿತು.
ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಸಹಕಾರಿ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ ಕುರಿತು ದಿಕ್ಸೂಚಿ ಭಾಷಣ ಮಾಡಿ, ಸಹಕಾರಿ ಸಂಸ್ಥೆಗಳು ಮಹಿಳಾ ಸದಸ್ಯರ ಉದ್ಯಮಶೀಲತೆ ಅಭಿವೃದ್ದಿ, ಕೌಶಲ್ಯ ತರಬೇತಿಗೆ ಪ್ರಾಧಾನ್ಯತೆ ನೀಡಬೇಕು ಎಂದು ತಿಳಿಸಿದರು.
ಸಹಕಾರ ವಿಷಯಗಳ ಕುರಿತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊರಂಗ್ರಪಾಡಿ ಸಹಕಾರಿ ವ್ಯವಸಾಯನಿಕ ಸೊಸೈಟಿಯ ಮುಖ್ಯಕಾರ್ಯ ನಿರ್ವಹಣಾಧಿಕಾರಿ ವಿಜಯಲಕ್ಷ್ಮೀ ಎಂ. ಉಪಸ್ಥಿತರಿದ್ದರು.
ಕೊರಂಗ್ರಪಾಡಿ ಸಹಕಾರಿ ಸಂಘದ ಉಪಾಧ್ಯಕ್ಷ ದಿನೇಶ್ ಕಿಣಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ವಂದಿಸಿದರು.







