ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷಿತ ಬಸ್ ನಿಲುಗಡೆ ಅಭಿಯಾನ: ಪ್ರಕಾಶ್ ಶೆಟ್ಟಿ

ಕುಂದಾಪುರ: ಕುಂದಾಪುರದಿಂದ ಮಾಬುಕಳವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಸ್ಸುಗಳನ್ನು ನಿಲ್ಲಿಸುವುದರಿಂದ ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಬಸ್ ತಂಗುದಾಣಗಳನ್ನು ಮಾಡಿಕೊಟ್ಟಿಲ್ಲ. ಆದ್ದರಿಂದ ಜನಸಾಮಾನ್ಯರಿಗೆ ಸುರಕ್ಷಿತವಾಗಿ ಬಸ್ಸು ಏರುವ, ಇಳಿಯುವ ಅವಕಾಶಕ್ಕಾಗಿ ಸುರಕ್ಷಿತ ಬಸ್ ನಿಲುಗಡೆ ಅಭಿಯಾನ ನಡೆಸಲಾಗುವುದು ಎಂದು ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆ ಇದರ ಸಂಚಾಲಕ ಪ್ರಕಾಶ್ ಶೆಟ್ಟಿ ತೆಕ್ಕಟ್ಟೆ ಹೇಳಿದ್ದಾರೆ.
ಗುರುವಾರ ಕುಂದಾಪುರ ಪ್ರೆಸ್ ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾ.ಹೆ.೬೬ರಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಬಗ್ಗೆ ನಮ್ಮ ಆಗ್ರಹ ಇದೆ. ಅವೈಜ್ಞಾನಿಕ ಕಾಮಗಾರಿ ಮತ್ತು ಕುಂದು ಕೊರತೆಗಳನ್ನು ಮನಗಂಡು ನಮ್ಮ ಸಂಸ್ಥೆ ಮತ್ತು ಕರಾವಳಿ ಘನ ವಾಹನ ಸಾರಥಿ ಇವರೊಂದಿಗೆ ಜಂಟಿಯಾಗಿ ಈಗ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದರು.
ನಾವು ಜಂಟಿಯಾಗಿ ಒಂದು ವಾರದವರೆಗೆ ಕುಂದಾಪುರದಿಂದ ಮಾಬುಕಳ ದವರೆಗೆ ಎಲ್ಲಾ ಬಸ್ಸು ನಿಲ್ದಾಣಗಳಲ್ಲಿ ಸಂಸ್ಥೆಯ ಸದಸ್ಯರು ಸ್ವ ಇಚ್ಛೆಯಿಂದ ಬಸ್ಸು ನಿಲುಗಡೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸೇವಾ ರೂಪದಲ್ಲಿ ಸಾರ್ವಜನಿಕರಿಗೆ ಮತ್ತು ಬಸ್ ಚಾಲಕರಿಗೆ ನೀಡಲಿದ್ದಾರೆ ಎಂದರು.
ಕುಂದಾಪುರದಿಂದ ಮಾಬುಕಳದವರೆಗೆ ಅಗತ್ಯ ಇರುವಲ್ಲಿ ಪ್ರತ್ಯೇಕವಾಗಿ ಎಕ್ಸ್‌ಪ್ರೆಸ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕು. ಹಂಗಳೂರು ದುರ್ಗಾಂಬಾ ಎದುರು, ಕೋಟೇಶ್ವರದ ಗುರುಪ್ರಸಾದ್ ಹೋಟೇಲಿನ ಎದುರು ಬ್ಯಾರಿಕೇಡ್ ಸಮೀಪ ಶಾಲಾ ಮಕ್ಕಳು ಬಸ್ಸಿಗಾಗಿ ಕಾಯುತ್ತಿದ್ದು, ಇದರಿಂದ ಆ ಪ್ರದೇಶ ದಲ್ಲಿ ತುಂಬಾ ಅವಘಢವಾಗುತ್ತವೆ. ಅದರ ಬಳಿಯೇ ಸರ್ವಿಸ್ ರಸ್ತೆ ಹಾದು ಹೋಗುತ್ತಿದ್ದು ಆ ಸರ್ವಿಸ್ ರಸ್ತೆಯಲ್ಲಿ ಶಾಲಾ ಮಕ್ಕಳ ಬಸ್ ನಿಲ್ಲುವಂತೆ ನೋಡಿಕೊಳ್ಳುವುದು. ಕುಂಭಾಶಿ ಆನೆಗುಡ್ಡೆ ದೇವಸ್ಥಾನದ ನಿಗದಿತ ಬಸ್ಸು ತಂಗುದಾಣದಲ್ಲಿಯೇ ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಅದೇ ರೀತಿ ಕೋಟದಲ್ಲಿ ಬಸ್ ನಿಲುಗಡೆಗೆ ಸುರಕ್ಷಿತ ಸ್ಥಳವಿಲ್ಲದಿರುವುದರಿಂದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸುವ ಖಾಸಗಿ ವಾಹನಗಳನ್ನು ನಿಲ್ಲದಂತೆ ನೋಡಿಕೊಂಡು ಬಸ್‌ಗಳನ್ನು ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸುವಂತೆ ಅನುಕೂಲ ಮಾಡಿಕೊಡುವುದು. ಕೋಟ ಹೈಸ್ಕೂಲ್‌ನಲ್ಲಿ ಬಸ್ಸನ್ನು ನಿಗದಿತ ಬಸ್ ನಿಲ್ದಾಣದಲ್ಲೇ ನಿಲ್ಲುವಂತೆ ನೋಡಿಕೊಳ್ಳುವುದು. ಕೋಟ ಹೈಸ್ಕೂಲ್ ಪರಿಸರದಲ್ಲಿ ಶಾಲೆ ಬಿಡುವ ಸಮಯದಲ್ಲಿ ಕೆಲವು ಬಸ್‌ಗಳಲ್ಲಿ ವಿದ್ಯಾರ್ಥಿಗಳು ಬಸ್ಸಿನ ಬಾಗಿಲಲ್ಲಿ ನೇತಾಡುತ್ತಾ ಸಾಗುತ್ತಿದ್ದು ಇದರ ಬಗ್ಗೆ ಗಮನಹರಿಸಬೇಕು.
ಸಾಲಿಗ್ರಾಮದಲ್ಲಿ ಕುಂದಾಪುರದಿಂದ ಉಡುಪಿಗೆ ಹೋಗುವ ಬಸ್‌ಗಳು ಸರ್ವಿಸ್ ರಸ್ತೆಯ ಬದಿಯಲ್ಲಿ ಬಸ್ ನಿಲ್ದಾಣದಲ್ಲಿ ನಿಲ್ಲುವಂತೆ ನೋಡಿಕೊಳ್ಳಬೇಕು. ಸಾಸ್ತಾನ ಬಸ್ ನಿಲ್ದಾಣದಲ್ಲಿ ಮತ್ತು ಎಲ್ಲಾ ಸರ್ವಿಸ್ ರಸ್ತೆಗಳಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಇದರಿಂದ ಬಸ್ಸುಗಳನ್ನು ನಿಲ್ಲಿಸಲು ಕಷ್ಟವಾಗುತ್ತಿದೆ. ಮಾಬುಕಳದಲ್ಲಿ ಬಸ್ ನಿಲ್ಲಿಸಲು ಸರಿಯಾದ ಸ್ಥಳವನ್ನು ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.
‘ಕರಾವಳಿ ಘನ ವಾಹನ ಸಾರಥಿ ಮಿತ್ರರು’ ಅಧ್ಯಕ್ಷ ಗೋಪಿರಾಜ್ ಮಾತನಾಡಿ, ಬಸ್ಸಿನವರಿಗೂ ಸಮಸ್ಯೆಗಳು ಇರುತ್ತವೆ. ಜನರೂ ಕೆಲವು ಬಾರಿ ನಿರ್ದಿಷ್ಟ ಬಸ್ ನಿಲ್ದಾಣಕ್ಕೆ ಹೋಗುವುದಿಲ್ಲ. ಆದ್ದರಿಂದ ಇದಕ್ಕೆ ಸಾರ್ವಜನಿಕರ ಹಾಗೂ ಬಸ್ಸಿನವರ ಸಹಕಾರ ಅಗತ್ಯ ಎಂದರು.
ಪ್ರಮೋದ್ ಪೂಜಾರಿ ಉಪಸ್ಥಿತರಿದ್ದರು.







