ಪಡುಬಿದ್ರಿ | ಸಾಹೇಬಾನ್ ಕಮ್ಯೂನಿಟಿ ಫೋರಂನಿಂದ 'ಸಾಹೇಬಾನ್ ಈದ್ ಮಿಲನ್ʼ ಕಾರ್ಯಕ್ರಮ

ಪಡುಬಿದ್ರಿ : ಸಾಹೇಬಾನ್ ಕಮ್ಯೂನಿಟಿ ಫೋರಂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ 'ಸಾಹೇಬಾನ್ ಈದ್ ಮಿಲನ್ʼ ಕಾರ್ಯಕ್ರಮ ಪಡುಬಿದ್ರಿಯ ಪ್ರೀಮಿಯರ್ ಗ್ರೀನ್‌ನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹೇಬಾನ್ ಕಮ್ಯೂನಿಟಿ ಫೋರಂ ಅಧ್ಯಕ್ಷರಾದ ಎಚ್.ಎಂ.ಅಫ್ರೋಜ್ ಅಸಾದಿ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ಇನ್ ಲ್ಯಾಂಡ್ ಬಿಲ್ಡರ್ಸ್ ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಮಾತನಾಡಿ, ಕೌಟುಂಬಿಕವಾಗಿ ಸಂಘಟಿತರಾಗಿ ಪರಸ್ಪರ ಸಹಕಾರ ಮನೋಭಾವ ಬೆಳೆಸಿಕೊಳ್ಳಲು ಇಂತಹ ಕುಟುಂಬ ಸಮ್ಮಿಲನ ಸಹಕಾರಿಯಾಗುತ್ತದೆ ಎಂದರು. ನಮ್ಮ ಸಮುದಾಯದಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಆದರೆ ನಾಯಕತ್ವದ ಕೊರತೆಯಿದೆ. ಆಫ್ರೊಜ್ ಅಸಾದಿ ಅವರು ಈ ಸಂಘಟನೆಯ ಮೂಲಕ ಸಮರ್ಥ ನಾಯಕತ್ವವನ್ನು ತೋರಿಸಿದ್ದಾರೆ. ನಾವು ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ದೊಡ್ಡ ಗುರಿ ಸಾಧನೆಯತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಅನಿವಾಸಿ ಉದ್ಯಮಿ, ದುಬೈನ ಸಿಎಚ್‌ಎಸ್ ಸ್ಕಫೋಲ್ಡಿಂಗ್ ನ ಅಧ್ಯಕ್ಷ ನಾಸಿರ್ ಸಯ್ಯದ್ ಮಾತನಾಡಿ, ಸಾಹೇಬಾನ್ ಕುಟುಂಬ ಶೈಕ್ಷಣಿಕವಾಗಿ ಮುಂದುವರಿದಿರುವುದು ಶ್ಲಾಘನಾರ್ಹವಾಗಿದೆ. ನಾವು ಬೇರೆ ಕ್ಷೇತ್ರಗಳಲ್ಲಿ, ವೃತ್ತಿಗಳಲ್ಲಿ ಇರುವವರು ಮುಂದೆ ಬಂದು ಒಗ್ಗಟ್ಟಿನಿಂದ ಕೆಲಸ ಮಾಡಿದರೆ, ಖಂಡಿತ ಅತ್ಯುತ್ತಮ ಪ್ರಗತಿ ಸಾಧ್ಯ ಎಂದು ಮಚ್ಚುಗೆ ವ್ಯಕ್ತಪಡಿಸಿದರು.
ದುಬೈನ ಪೆಟ್ರೋ ಸೊಲ್ಯೂಷನ್ಸ್ ಎಫ್ ಝಡ್ ಈ ಕಂಪನಿಯ ಆಡಳಿತ ನಿರ್ದೇಶಕ ಮತೀನ್ ಅಹ್ಮದ್ ಚಿಲ್ಮಿ ಅವರು ಮಾತನಾಡಿ, ನಮ್ಮ ಸಮುದಾಯದಲ್ಲಿ ಯಾರು ಸಮಸ್ಯೆಯಲ್ಲಿದ್ದಾರೆ. ಅವರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸ ಆಗಬೇಕಿದೆ. ಅಂತಹ ಕೆಲಸ ಈ ಸಂಘಟನೆಯಿಂದ ಆಗಲಿ ಎಂದು ಹಾರೈಸಿದರು.
ಎಸ್‌ಸಿಎಫ್‌ನ ಕಾರ್ಯದರ್ಶಿ ಇಕ್ಬಾಲ್ ಮನ್ನಾ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಸಾಧಕರಾದ ಮಿಶಾಲ್ ಅಸಾದಿ, ತುಬಾ ಫಿರ್ದೌಸ್, ಖತೀಜಾ ಸಲಾಹುದ್ದೀನ್ ಸಾಹೇಬ್, ಅಮಿರಾತ್ ಅದ್ದುನ್ಯಾ, ಶೇಖ್ ಅಫ್ಸೀನಾ, ಖದೀಜಾ ಮುಹಮ್ಮದ್ ಶಕೀಲ್, ತಿಶಾ ರೀಮ್, ಆಯಿಶಾ ಶಮ್ರಾ, ಅಸಾದುರ್ ರೆಹ್ಮಾನ್ ಶೇಖ್, ರಿಝ್ಮಾ ಝೈನಬ್, ಮುಹಮ್ಮದ್ ಅಯ್ಮಾನ್ ಸಿರಾಜ್ ಅವರನ್ನು ಅಭಿನಂದಿಸಲಾಯಿತು.
ಸಾಹೇಬಾನ್ ಕಮ್ಯೂನಿಟಿ ಫೋರಂನ ಆಡಳಿತ ಸಮಿತಿಯ ಪದಾಧಿಕಾರಿಗಳಾದ ಅಧ್ಯಕ್ಷ HM ಅಫ್ರೊಝ್ ಅಸ್ಸಾದಿ, ಉಪಾಧ್ಯಕ್ಷ ಜುನೈದ್, ಕಾರ್ಯದರ್ಶಿ ಎಂ ಇಕ್ಬಾಲ್ ಮನ್ನಾ, ಖಜಾಂಚಿ ರಫೀಕ್ ಅಸ್ಸಾದಿ, ಸಮಿತಿ ಸದಸ್ಯರಾದ ಡಾ. ರುಕ್ಸಾರ್ ಅಂಜುಮ್, ಡಾ. ಫಿರ್ದೋಸ್ ( ಪ್ರಾಂಶುಪಾಲರು), C A ಅಶ್ಫಾಕ್ ಅಹ್ಮದ್, ಕಬೀರ್ ಅಲಿ ( ಆರ್ಕಿಟೆಕ್ಟ್ ), ಮೊಹಮ್ಮದ್ ಇಫ್ತಿಕಾರ್ ಆದಿಲ್ (ಕಾಫಿ ಎಸ್ಟೇಟ್) ರನ್ನು ಎಲ್ಲರಿಗೂ ಪರಿಚಯಿಸಲಾಯಿತು.
ಆಯಿಶಾ ಮುಬೀನ್ ಕಿರಾಅತ್ ಪಠಿಸಿದರು. ಆಲಿಯ ಖಾನ್ ಹಾಗೂ ರಿಫಾತ್ ಗುರ್ಕಾರ್ ನಿರೂಪಿಸಿದರು.
ಸಮ್ಮಿಲನದಲ್ಲಿ ಸಾಹೇಬಾನ್ ಸಮುದಾಯದ ಕುಟುಂಬಗಳಿಗಾಗಿ ವಿವಿಧ ಮನೊರಂಜನಾ ಕಾರ್ಯಕಮಗಳು, ಕ್ವಿಝ್, ಚಿತ್ರ ಬಿಡಿಸುವ ಸ್ಪರ್ಧೆ ಸಹಿತ ವಿವಿಧ ಸ್ಪರ್ಧೆಗಳು ನಡೆಯಿತು.







