ಬಂಜಾರ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಸಂತ ಸೇವಾಲಾಲರು: ಎಂ.ಎ.ಗಫೂರ್

ಉಡುಪಿ, ಫೆ.15: ಬಂಜಾರ ಸಮುದಾಯವನ್ನು ಒಗ್ಗೂಡಿಸಿ ಶಕ್ತಿ ತುಂಬಿ ಸಮುದಾಯಕ್ಕೆ ಜ್ಞಾನದ ಬೆಳಕನ್ನು ನೀಡಿದವರು ಶ್ರೀಸಂತ ಸೇವಾಲಾಲ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೃಷ್ಣನಗರಿ ಶ್ರೀಸಂತ ಸೇವಾ ಲಾಲ್ ಬಂಜಾರ ಸಂಘ ಉಡುಪಿ ಜಿಲ್ಲೆ ಇವುಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಶ್ರೀಸಂತ ಸೇವಾಲಾಲ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಸಂತ ಸೇವಲಾರರು ಸತ್ಯ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ವಚನ, ಉಪದೇಶಗಳ ಮೂಲಕ ಸಮಾಜದಲ್ಲಿನ ಮೂಢ ನಂಬಿಕೆಗಳನ್ನು ಹೋಗಲಾಡಿಸಿ ಸಮಾಜ ಸುಧಾರಣೆಗಾಗಿ ಅನೇಕ ರೀತಿಯಲ್ಲಿ ಕೊಡುಗೆ ಗಳನ್ನು ನೀಡಿದರು. ವ್ಯಸನ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಮುಂದಾದ ಮಹಾನ್ ವ್ಯಕ್ತಿ ಅವರು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಭಕ್ತಿಪಂಥ ಕಾಲದಲ್ಲಿ ಸಮಾಜದ ವ್ಯವಸ್ಥೆ ತಿದ್ದಲು, ಶ್ರಮಿಸಿದ ಸಂತ ಶ್ರೀಸೇವಾಲಾಲರು ಬುಡಕಟ್ಟಿನ ಜನರಲ್ಲಿ ಧೈರ್ಯ ಮತ್ತು ಆತ್ಮಸ್ಥೈರ್ಯ ಮೂಡಿ ಸಿದ ಮಹಾನ್ ದಾರ್ಶನಿಕ. ಅವರ ಮಾರ್ಗದರ್ಶನ ದಂತೆ ಇಂದಿನ ಪೀಳಿಗೆ ಉತ್ತಮ ಶಿಕ್ಷಣವನ್ನು ಪಡೆದು ಸಮಾಜದ ಏಳಿಗೆಗಾಗಿ ಶ್ರಮಿಸುವಂತಾಗಬೇಕು ಎಂದು ತಿಳಿಸಿದರು.
ಕಳತ್ತೂರು ಪಿ.ಕೆ.ಎಸ್. ಪ್ರೌಢಶಾಲೆಯ ಸಹಶಿಕ್ಷಕ ಸಂತೋಷ್ ಅ ರಾಠೋಡ ಶ್ರೀಸಂತ ಸೇವಾಲಾಲರ ಕುರಿತು ವಿಶೇಷ ಉಪನ್ಯಾಸ ನೀಡಿ ದರು. ಈ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ಅಂಜಲಿ ಅವರನ್ನು ಗೌರವಿಸಲಾಯಿತು.
ಉಡುಪಿ ಜಿಲ್ಲಾ ಕೃಷ್ಣನಗರಿ ಶ್ರೀಸಂತ ಸೇವಾಲಾಲ ಬಂಜಾರ ಸಂಘದ ಅಧ್ಯಕ್ಷ ಕುಮಾರ್ ಕೆ.ಎಂ., ಪದಾಧಿಕಾರಿ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ವರ್ಷಾ ಬಿ. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣನಗರಿ ಶ್ರೀಸಂತ ಸೇವಾ ಲಾಲ ಬಂಜಾರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್ ಲಮಾಣಿ ವಂದಿಸಿದರು.






