ಸಾಲಿಗ್ರಾಮ ಡಿವೈನ್ ಪಾರ್ಕ್ ಸ್ಥಾಪಕ ಎ.ಚಂದ್ರಶೇಖರ್ ನಿಧನ

ಬ್ರಹ್ಮಾವರ: ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರಸಾರಕ್ಕಾಗಿ ಸಾಲಿಗ್ರಾಮದಲ್ಲಿ ಡಿವೈನ್ ಪಾರ್ಕ್ ಸ್ಥಾಪಿಸಿದ್ದ ಡಾ.ಎ.ಚಂದ್ರಶೇಖರ್ ಉಡುಪ (75) ಹೃದಯಾಘಾತದಿಂದ ಜ.7ರಂದು ಬೆಳಗಿನ ಜಾವ ನಿಧನರಾದರು.
ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಡಿವೈನ್ ಪಾರ್ಕ್ ಮೂಲಕ ಹಲವು ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದ ಇವರು ವೃತ್ತಿಯಲ್ಲಿ ವೈದ್ಯರಾಗಿದ್ದರು. ವೈದ್ಯಕೀಯ ವ್ಯಾಸಂಗ ಮಾಡುತ್ತಿರುವಾಗ ವಿವೇಕಾನಂದರ ಚಿಂತನೆಗಳ ಪ್ರಭಾವಕ್ಕೆ ಒಳಗಾಗಿ ಅನಂತರ ಡಿವೈನ್ ಪಾರ್ಕ್ ಎಂಬ ಸಂಸ್ಥೆಯನ್ನು ಆರೋಗ್ಯ ಮತ್ತು ಅಧ್ಯಾತ್ಮದ ನೆಲೆಯಲ್ಲಿ ಪ್ರಾರಂಭಿಸಿದ್ದರು. ಇವರಿಗೆ ದೇಶ-ವಿದೇಶಗಳಲ್ಲಿ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾರೆ.
ಡಿವೈನ್ ಪಾರ್ಕ್ ನ ಸಹಸಂಸ್ಥೆಯಾಗಿ ಎಸ್ಎಚ್ಆರ್ಎಫ್ (ಯೋಗಬನ) ಸ್ಥಾಪಿಸಿದ ಇವರು ಯೋಗ, ಪ್ರಕೃತಿ, ಆಯುರ್ವೇದಗಳ ಜತೆಗೆ ಆಧ್ಯಾತ್ಮಿಕ ಚಿಕಿತ್ಸಕ ಕ್ರಮವನ್ನೂ ಮುನ್ನೆಲೆಗೆ ತಂದಿದ್ದರು.
ಇಂದು ಸಂಜೆ 4ರ ತನಕ ಡಿವೈನ್ ಪಾರ್ಕ್ ನ ಜ್ಞಾನ ಮಂದಿರದಲ್ಲಿ ಮೃತರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಅಂತಿಮ ವಿಧಿ ವಿಧಾನ ನೆರವೇರಲಿದೆ ಎಂದು ಡಿವೈನ್ ಪಾರ್ಕ್ ಪ್ರಕಟನೆಯಲ್ಲಿ ತಿಳಿಸಿದೆ.





