ಸಾಲಿಗ್ರಾಮ: ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಕೋಟ, ಆ.20: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಸೂಕ್ತ ನ್ಯಾಯ ಒದಗಿಸಲು ಆಗ್ರಹಿಸಿ ’ಸೌಜನ್ಯಾ ಹೆಣ್ಣಲ್ಲವೇ’ ಪ್ರತಿಭಟನಾ ಸಭೆಯನ್ನು ಸಾಲಿಗ್ರಾಮ ಪೇಟೆಯಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಇದಕ್ಕೂ ಮೊದಲು ಸಾಲಿಗ್ರಾಮದ ಶ್ರೀಗುರು ನರಸಿಂಹ ಮತ್ತು ಆಂಜನೇಯ ಸ್ವಾಮಿ ದೇವಳದಲ್ಲಿ ಸೌಜನ್ಯ ತಾಯಿ ಕುಸುಮಾ ತನ್ನ ಮಗಳ ಹತ್ಯೆ ಮತ್ತು ಅತ್ಯಾಚಾರಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ದೇವರುಗಳಲ್ಲಿ ಪ್ರಾರ್ಥಿಸಿದರು.
ನಂತರ ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕುಸುಮಾ, ನನ್ನ ಮಗಳಿಗಾದ ಅನ್ಯಾಯದ ಬಗ್ಗೆ ಕಳೆದ 11 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ನಮಗೆ ನ್ಯಾಯ ಸಿಗುವ ತನಕ ಈ ಹೋರಾಟ ನಿರಂತರ ವಾಗಿರುತ್ತದೆ. ಆರೋಪಿಗಳ ಹೆಸರನ್ನು ನಾನು ಬಹಿರಂಗಪಡಿಸಿದ್ದೇನೆ ಎಂದು ತಿಳಿಸಿದರು.
ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಅಂಬಿಕ ವಿ.ಪ್ರಭು ಮಾತನಾಡಿ, ಸೌಜನ್ಯಾ ಪ್ರಕರಣಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾನೂನು ಹೋರಾಟ ಕೂಡ ನಡೆಸಲಾಗುತ್ತದೆ. ಸೌಜನ್ಯಾ ಪ್ರಕರಣ ಇನ್ನೂ ಮುಗಿದಿಲ್ಲ, ಗ್ರಾಮ ಗ್ರಾಮದಲ್ಲಿಯೂ ಜನ ನ್ಯಾಯ ಕೇಳುತ್ತಿದ್ದು ಗೃಹಸಚಿವರು ಮರು ತನಿಖೆ ಮಾಡೋದಿಲ್ಲ ಎಂಬ ಹೇಳಿಕೆ ಕೊಟ್ಟಿರುವುದು ಸಮಂಜಸವಲ್ಲ ಎಂದರು.
ಸಾಮಾಜಿಕ ಹೋರಾಟಗಾರ ಡಾ.ದಿನೇಶ್ ಗಾಣಿಗ ಮಾತನಾಡಿ, ಬೆದರಿಕೆ ಕರೆಗಳು ಬರುತ್ತಿದ್ದು ಸೌಜನ್ಯಾ ಕುಟುಂಬಕ್ಕೆ ನ್ಯಾಯ ಕೊಡುವುದು ನಿಶ್ಚಿತ. ಪ್ರಕರಣದ ದಿಕ್ಕು ತಪ್ಪಿಸುವರು ದಾಖಲಾತಿಯೊಂದಿಗೆ ಮಾತನಾಡಲಿ. ಸೌಜನ್ಯಾ ತಾಯಿ ಮೇಲೆ ಆರೋಪ ಮಾಡುವ ಮೊದಲು ಪೂರ್ವಪರ ತಿಳಿದು ಮಾತನಾಡಬೇಕು. ಜನರ ದಿಕ್ಕು ತಪ್ಪಿಸುವ ಯಾವುದೇ ಅಡೆತಡೆಗಳು ಬಂದರೂ ಕೂಡ ಸೌಜನ್ಯಾ ಪರ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದರು.
ಸೌಜನ್ಯಾ ಮಾವ ವಿಠಲ ಗೌಡ, ಸಾಮಾಜಿಕ ಕಾರ್ಯಕರ್ತ ಸುಧೀರ್ ಮಲ್ಯಾಡಿ ಉಪಸ್ಥಿತರಿದ್ದರು. ನಾಗರಾಜ ಗಾಣಿಗ ಪ್ರಾಸ್ತಾವಿಕ ಮಾತನಾಡಿದರು. ಪ್ರಸಾದ ಬಿಲ್ಲವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.







