ಸ್ಯಾಂಡಲ್‌ವುಡ್ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ನಿಧನ

ಕುಂದಾಪುರ: ಕನ್ನಡ ಚಲನಚಿತ್ರ ಹಾಗೂ ರಂಗಭೂಮಿಯ ಖ್ಯಾತ ಕಲಾ ನಿರ್ದೇಶಕ ಹಾಗೂ ಪೋಷಕ ನಟ ದಿನೇಶ್ ಮಂಗಳೂರು (55) ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ ನಿಧನರಾದರು.
ಮೂಲತಃ ಮಂಗಳೂರಿನವರಾದ ದಿನೇಶ್, ಕಳೆದ ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಂದಾಪುರದ ಸಮೀಪ ಸಿನಿಮಾವೊಂದರ ಚಿತ್ರೀಕರಣದ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿತ್ತು.
ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ ದಿನೇಶ್ ಅವರು ಮರಳಿ ಕುಂದಾಪುರದಲ್ಲಿ ನೆಲೆಸಿದ್ದರು. ಆದರೆ ಕಳೆದ ವಾರ ಮತ್ತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಿದೆ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ದಿನೇಶ್ ಮಂಗಳೂರು, ಕಲಾವಿದನಾಗಬೇಕೆಂದು ಬಯಸಿದ್ದರು. ಆದರೆ ಅವರಿಗೆ ಆರಂಭದಲ್ಲಿ ಒಲಿದಿದ್ದು ಕಲಾ ನಿರ್ದೇಶನ. ಖ್ಯಾತ ಕಲಾ ನಿರ್ದೇಶಕ ಶಶಿಧರ್ ಅಡಪ ಅವರ ಬಳಿ '' ಚಿನ್ನಾರಿ ಮುತ್ತ'' ಸಹಿತ ಕೆಲ ಚಿತ್ರಗಳಿಗೆ ಸಹಾಯಕರಾಗಿ ಆರಂಭದ ಕೆಲ ವರ್ಷ ಕೆಲಸ ಮಾಡಿದ್ದ ದಿನೇಶ್ ಮಂಗಳೂರು ಆ ನಂತರ ಟಿ.ಎಸ್ ನಾಗಾಭರಣ ನಿರ್ದೇಶನದ ''ಜನುಮದ ಜೋಡಿ'' ಚಿತ್ರದ ಮೂಲಕ ಸ್ವತಂತ್ರ್ಯ ಕಲಾ ನಿರ್ದೇಶಕರಾದರು. ಆ ನಂತರ '' ವೀರ ಮದಕರಿ''..''ಚಂದ್ರಮುಖಿ ಪ್ರಾಣಸಖಿ''.. ''ನಂ 73 ಶಾಂತಿನಿವಾಸ'' ಸೇರಿ ಹಲವು ಚಿತ್ರಗಳಿಗೆ ಕಲಾ ನಿರ್ದೇಶನ ಮಾಡಿದ್ದ ದಿನೇಶ್ ಮಂಗಳೂರು ಅವರಿಗೆ ಶಿವರಾಜ್ ಕುಮಾರ್ ಅಭಿನಯದ ''ರಾಕ್ಷಸ'' ಚಿತ್ರದಲ್ಲಿನ ಆರ್ಟ್ ವರ್ಕ್‌ಗೆ 2004-05ನೇ ಸಾಲಿನ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಮೊದಲಿಂದ ಇವರೊಳಗೆ ಇದ್ದ ಕಲಾವಿದನಿಗೆ ಕೆ.ಎಂ. ಚೈತನ್ಯ ನಿರ್ದೇಶನದ ''ಆ ದಿನಗಳು'' ಚಿತ್ರ ಹೆಸರು ತಂದು ಕೊಟ್ಟಿತ್ತು. ಈ ಚಿತ್ರದಲ್ಲಿ ಸೀತಾರಾಮ್ ಶೆಟ್ಟಿ ಪಾತ್ರಕ್ಕೆ ದಿನೇಶ್ ಮಂಗಳೂರು ಜೀವ ತುಂಬಿದ್ದರು. ಆ ನಂತರ ''ಉಳಿದವರು ಕಂಡಂತೆ'', ''ರಿಕ್ಕಿ'', ''ಕಿರಿಕ್ ಪಾರ್ಟಿ'', ''ರಣ ವಿಕ್ರಮ'', ''ಹರಿಕಥೇ ಅಲ್ಲ ಗಿರಿಕಥೆ'' ಹೀಗೆ ಹಲವು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅನೇಕರ ಹೃದಯ ಗೆದ್ದಿದ್ದ ದಿನೇಶ್ ಮಂಗಳೂರು ''ಕೆ.ಜಿ.ಎಫ್'' ಚಿತ್ರದ ಮೂಲಕ ಭಾರತದೆಲ್ಲೆಡೆ ಜನಜನಿತರಾಗಿದ್ದರು. 'ಬಾಂಬೆ ಡಾನ್' ಎಂದೇ ಕರೆಯಲ್ಪಡುತ್ತಿದ್ದರು. ತೀರಾ ಇತ್ತೀಚೆಗೆ ಬಂದ ''ಭುವನಂ ಗಗನಂ''.. ''ಎಲ್ಲೋ ಜೋಗಪ್ಪ ನಿನ್ನ ಅರಮನೆ''.. ಚಿತ್ರಗಳಲ್ಲಿ ಕೂಡ ಅಭಿನಯಿಸಿದ್ದರು.
ದಿನೇಶ್ ಮಂಗಳೂರು ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮೃತರು ಮಕ್ಕಳಾದ ಪವನ್, ಸಜ್ಜನ್ ಹಾಗೂ ಪತ್ನಿ ಭಾರತಿ ಅವರನ್ನು ಅಗಲಿದ್ದಾರೆ. ದಿನೇಶ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬೆಂಗಳೂರು ಲಗ್ಗೆರೆಯ ಅವರ ಮನೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.







