ಸಮಾಜದ ಏಳಿಗೆಗೆ ಸವಿತಾ ಮಹರ್ಷಿ ಮಾರ್ಗದರ್ಶನ ಅತೀ ಅಗತ್ಯ: ಎಂ.ಎ.ಗಫೂರ್

ಉಡುಪಿ, ಜ.25: ಸವಿತಾ ಸಮಾಜವು ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕತೆ ಮತ್ತು ಸೃಜನಶೀಲತೆಯನ್ನು ಹೊಂದುವ ಮೂಲಕ ಸಮಾಜಕ್ಕೆ ಅನೇಕ ಕೊಡುಗೆಯನ್ನು ನೀಡಿದ್ದು, ವೃತ್ತಿಯ ಮೂಲ ಪುರುಷರಾದ ಸವಿತಾ ಮಹರ್ಷಿ ಅವರ ಮಾರ್ಗದರ್ಶನ ಸಮಾಜದ ಏಳಿಗೆಗೆ ಅತೀ ಅಗತ್ಯ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಸವಿತಾ ಸಮಾಜದ ಸಹಯೋಗದಲ್ಲಿ ರವಿವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸವಿತಾ ಮಹರ್ಷಿ ಜಯಂತಿ ಕಾರ್ಯವನ್ನು ಉದ್ಘಾಟಿಸಿ, ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ಅವರು ಮಾತನಾಡುತಿದ್ದರು.
ಸಮಾಜವನ್ನು ಸನ್ಮಾರ್ಗದಲ್ಲಿ ನಡೆಯುವಂತ ಸಂದೇಶವನ್ನು ನೀಡಿದ ಮಹನೀಯರು ಜಯಂತಿ ಕಾರ್ಯಕ್ರಮವನ್ನು ಸರಕಾರ ಆಚರಿಸಿಕೊಂಡು ಬಂದಿದ್ದು,ಸವಿತಾ ಸಮಾಜದ ಏಳಿಗೆಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಮುಂದಿನ ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದ ಮಕ್ಕಳು ಶಿಕ್ಷಣವನ್ನು ಪಡೆವುದ ರೊಂದಿಗೆ ಶೈಕ್ಷಣಿಕವಾಗಿ ಆರ್ಥಿಕವಾಗಿ ಸಮಾಜವು ಇನ್ನಷ್ಟು ಅಭಿವೃದ್ಧಿ ಹೊಂದುವಂತಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಪಂ ಮುಖ್ಯ ಯೋಜನಾಧಿಕಾರಿ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಸವಿತಾ ಮಹರ್ಷಿ ಗಳು ಜೀವನ ನಿರ್ವಹಣೆಗಾಗಿ ಅನೇಕ ತತ್ವಗಳನ್ನು ಕೊಡುಗೆಯಾಗಿ ನೀಡಿದ್ದು, ಪ್ರಸ್ತುತ ಬದುಕಿನಲ್ಲಿ ಅವುಗಳ ಪಾಲನೆ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರಾಜು ಸಿ.ಭಂಡಾರಿ ಕಿನ್ನಿಮುಲ್ಕಿ, ಸವಿತಾ ಮಹರ್ಷಿಗಳ ತತ್ವ ಆದರ್ಶ ಗಳ ಪಾಲನೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿನಿತ್ಯದ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.
ಸಮುದಾಯದ ಹಿರಿಯರಾದ ಗೋವಿಂದ ಭಂಡಾರಿ ಬನ್ನಂಜೆ, ಸವಿತಾ ಮಹರ್ಷಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಶೇಖರ ಸಾಲಿಯಾನ್ ಆದಿಉಡುಪಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿ ದರು. ಮಹೇಶ್ ಕಾರ್ಯಕ್ರಮ ನಿರೂಪಿಸಿ, ಶೇಖರ್ ಸಾಲಿಯಾನ್ ವಂದಿಸಿದರು.







