ಮರಳು ಸಾಗಾಟದ ಟಿಪ್ಪರ್ ಢಿಕ್ಕಿ: ಸ್ಕೂಟರ್ ಸವಾರ ಸ್ಥಳದಲ್ಲಿಯೇ ಮೃತ್ಯು

ಕುಂದಾಪುರ, ಜ.7: ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಂಗಳೂರು ಜಂಕ್ಷನ್ ಹತ್ತಿರದ ಜನನಿ ಹೋಮ್ ಅಪ್ಲಾಯನ್ಸಸ್ ಎದುರು ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಬುಧವಾರ ಬೆಳಗ್ಗೆ 10ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಆಲೂರು ಮೂಲದ ಕೋಟೇಶ್ವರದ ಅಂಕದಕಟ್ಟೆ ಬಳಿ ಬಾಡಿಗೆ ಮನೆ ನಿವಾಸಿ ಕೃಷ್ಣಮೂರ್ತಿ ಅಡಿಗ(57) ಎಂದು ಗುರುತಿಸಲಾಗಿದೆ. ಅಡುಗೆ ಕೆಲಸ ಮಾಡಿಕೊಂಡಿದ್ದ ಇವರು, ವಾರದ ಹಿಂದೆ ಖರೀದಿಸಿದ ಸ್ಕೂಟರ್‌ಗೆ ಪೆಟ್ರೋಲ್ ಹಾಕಿಸಲು ಮನೆಯಿಂದ ಹೊರಟವರು ಸರ್ವೀಸ್ ರಸ್ತೆಯಿಂದ ರಾ.ಹೆದ್ದಾರಿಗೆ ತಿರುವು ಪಡೆಯುತ್ತಿದ್ದರು.
ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆ ಹೋಗುತ್ತಿದ್ದ ಟ್ಟಿಪ್ಪರ್, ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಆರೋಪಿ ಟಿಪ್ಪರ್ ಚಾಲಕ ಶ್ರೇಯಾಂಶ ಯುವರಾಜ ಜೈನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ, ಸಂಚಾರ ಠಾಣೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







