ಕೃಷಿಯಿಂದ ಸ್ವಾವಲಂಬಿ, ಸ್ವಾಭಿಮಾನಿ ಬದುಕು ಸಾಧ್ಯವಿದೆ: ಸಚಿವ ಚೆಲುವರಾಯ ಸ್ವಾಮಿ

ಬ್ರಹ್ಮಾವರ, ಅ.14: ಕೃಷಿಗೆ ಈಗ ದೇಶದಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತಿದೆ. ದೇಶದ ಸಮೃದ್ಧಿಗೆ, ಅಭಿವೃದ್ಧಿಗೆ; ಎಲ್ಲರೂ ಸ್ವಾಭಿ ಮಾನಿಗಳಾಗಿ ಸ್ವಾವಲಂಬಿ ಬದುಕಿನ ಉದ್ಯೋಗ ಸಿಗಲು ಕೃಷಿಯಲ್ಲೇ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಇಲ್ಲಿಗೆ ಸಮೀಪದ ಚೇರ್ಕಾಡಿ ಶಾಲೆ ಮೈದಾನದಲ್ಲಿ ಶ್ರೀಜ್ಞಾನಶಕ್ತಿ ಕ್ರೀಡಾ ಮತ್ತು ಕಲಾಸಂಘವು, ಬ್ರಹ್ಮಾವರದ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ತೋಟಗಾರಿಕಾ ಇಲಾಖೆ ಉಡುಪಿ, ರೋಟರಿ ರಾಯಲ್ ಬ್ರಹ್ಮಾವರ, ಹಾಗೂ ಲಯನ್ಸ್ ಕ್ಲಬ್ ಬಾರ್ಕೂರು -ಬ್ರಹ್ಮಾವರ ಇವುಗಳ ಸಹಯೋಗ ದಲ್ಲಿ ಆಯೋಜಿಸಿದ ಎರಡು ದಿನಗಳ ಕೃಷಿ ಆಹಾರ ಸಸ್ಯ ಮೇಳ ಮತ್ತು ಉದ್ಯೋಗ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕೃಷಿ ಚಟುವಟಿಕೆಯನ್ನು ಆಸಕ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಅತ್ಯಂತ ಲಾಭದಾಯಕವಾಗಿ ಮಾಡಬ ಹುದಾಗಿದ್ದು, ಇದಕ್ಕೆ ರಾಜ್ಯದಲ್ಲೇ ಹಲವು ಯಶಸ್ವಿ ಕೃಷಿಕರ ನಿದರ್ಶನಗಳಿವೆ. ಚಿಕ್ಕಬಳ್ಳಾಪುರದ ಕೃಷಿ ಪದವೀಧರ ರೊಬ್ಬರು ಕೃಷಿಯಿಂದಲೇ ಬದುಕುಕಟ್ಟಿಕೊಂಡಿದ್ದು, ವಾರ್ಷಿಕ 150 ಕೋಟಿ ರೂ.ಗಳ ವ್ಯವಹಾರ ಮಾಡುತಿದ್ದಾರೆ. ಕೋಲಾರದ ರೈತರೊಬ್ಬರು 250ರಿಂದ 300 ಮಂದಿಗೆ ಉದ್ಯೋಗ ನೀಡಿ ಒಂದು ಕೋಟಿ ರೂ.ಆದಾಯ ಗಳಿಸುತಿದ್ದಾರೆ. ಚಿತ್ರದುರ್ಗದ ಸಣ್ಣ ಹಿಡುವಳಿದಾರ ರೈತರು ಸಹ ವರ್ಷಕ್ಕೆ 10 ಲಕ್ಷರೂ. ಲಾಭ ಗಳಿಸುತಿದ್ದಾರೆ ಎಂದರು.
ರಾಜ್ಯ ಸರಕಾರ ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಲಾಭದಾಯಕ ವಾಗಿ ಮಾಡಲು ಸಂಪೂರ್ಣ ಬೆಂಬಲ ಮತ್ತು ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದ ಕೃಷಿ ಸಚಿವರು, ಕೃಷಿ ಇಂದು ಲಾಭದಾಯಕವೆನಿಸಿ ಕೊಳ್ಳುವ ಜೊತೆಗೆ ಹಲವು ಮಂದಿಗೆ ಉದ್ಯೋಗ ಒದಗಿಸುವ ಕ್ಷೇತ್ರ ಸಹಾ ಆಗಿದೆ. ಕೃಷಿಯಿಂದ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.
ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಯಾಗದಂತೆ ಸಮರ್ಪಕವಾಗಿ ವಿತರಿಸಲಾಗಿದೆ. ಅಲ್ಲದೇ ನಕಲಿ ಬೀಜ ಮಾರಾಟಗಾರರು ಮತ್ತು ರಸಗೊಬ್ಬರ ಮಾರಾ ಟಕ್ಕೆ ಕಡಿವಾಣ ಹಾಕಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬೃಹತ್ ಪ್ರಮಾಣದಲ್ಲಿ ತೆರೆಯಲು ಅನುದಾನ ಮೀಸಲಿಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇಗೆ 10000 ರೂ ಸಹಾಯಧನವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅವರ ಜಮೀನಿನ ಮಣ್ಣಿನ ಫಲವ ತ್ತತೆ, ಅದರಲ್ಲಿ ಬೆಳೆಯ ಬಹುದಾದ ಬೆಳೆಗಳು, ಹವಾಮಾನ ಆಧಾರಿತವಾಗಿ ಬೆಳೆಯಬಹುದಾದ ಬೆಳೆಗಳು, ಕಡಿಮೆ ನೀರಿ ನಲ್ಲಿ ಬೆಳೆಯಬಹುದಾದ ಮತ್ತು ಹೆಚ್ಚು ಇಳುವರಿ ನೀಡುವಂತಹ ಬೆಳೆಯಬಹುದಾದ ಬೆಳೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಯನ್ನು ನೀಡಲಾಗುತ್ತಿದೆ ಎಂದರು.
ಕೃಷಿ ಬೆಳವಣಿಗೆಯ ಮೂಲಕ ರಾಜ್ಯದ ಹಾಗೂ ರಾಜ್ಯದ ಜನತೆಯ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದ್ದು ಇದಕ್ಕಾಗಿ ನಮ್ಮ ಸರಕಾರ ರಾಜ್ಯಾದ್ಯಂತ ಕೃಷಿ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ಉಡುಪಿ ಜಿಲ್ಲೆಯ ರೈತರು ವರ್ಷದ ಎಲ್ಲಾ ಕಾಲದಲ್ಲೂ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಗತ್ಯವಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಸಣ್ಣ ನೀರಾವರಿ ಸಚಿವರು ಮತ್ತು ಉಪ ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದ ಚೆಲುವರಾಯ ಸ್ವಾಮಿ, ಬ್ರಹ್ಮಾವರ ದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ ಅಧಿಕಾರಿಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಗಳೊಂದಿಗೆ ಚರ್ಚಿಸಿ, ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತ ನಾಡಿ, ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಕೃಷಿ ವಿಜ್ಞಾನಿಗಳು ಮಾಡುವ ಯಶಸ್ವಿ ಪ್ರಯೋಗಗಳು ಪ್ರಯೋಗಶಾಲೆಯಿಂದ ರೈತರ ಜಮೀನುಗಳಿಗೆ ಬರಬೇಕು, ರೈತರು ಕೃಷಿ ವಿಜ್ಞಾನಿಗಳು ನೀಡುವ ಸಲಹೆ ಗಳನ್ನು ಸ್ವೀಕರಿಸಿ, ಅವುಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವ ನ್ನಾಗಿ ಮಾಡಿಕೊಳ್ಳಬೇಕು ಎಂದರು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಾವರ ಕೃಷಿ ಕೇಂದ್ರ ಹೊಂದಿರುವ 350 ಎಕರೆ ಪ್ರದೇಶದಲ್ಲಿ ಕೃಷಿ ಕಾಲೇಜು ಮತ್ತು ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ಕೃಷಿಗೆ ಹೆಚ್ಚಿನ ಬೆಂಬಲ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ನಾಯ್ಕ, ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್, ವಿಶ್ರಾಂತ ಕುಲಪತಿ ಡಾ.ಎಂ.ಕೆ.ನಾಯಕ್, ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಉಪಸ್ಥಿತರಿದ್ದರು.
ಕೃಷಿ ಮೇಳದ ಸಂಚಾಲಕ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಅಖಿಲ್‌ಕುಮಾರ್ ಹೆಗ್ಡೆ ಸ್ವಾಗತಿಸಿದರೆ, ಮಾಜಿ ರೋಟರಿ ಗವರ್ನರ್ ಜ್ಞಾನವಸಂತ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪ್ರಗತಿಪರ ಕೃಷಿಕರು, ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ಪರಿಸರದ ಪ್ರಗತಿಪರ ಕೃಷಿಕರಾದ ಚೇರ್ಕಾಡಿ ವಾರಣಾಸಿಯ ಬಾಬುರಾಯ ಆಚಾರ್ಯ ಹಾಗೂ ಸುಮತಿ ಶೆಟ್ಟಿ ಅವರನ್ನು ಸಚಿವರು ಸನ್ಮಾನಿಸಿದರು.
ಇವರೊಂದಿಗೆ ಸಾಧಕರಾದ ಯಕ್ಷಗಾನ ಕಲಾವಿದ ಶ್ಯಾಮ ನಾಯ್ಕ ಚೇರ್ಕಾಡಿ, ಉರಗ ತಜ್ಞ ಪ್ರಸಾದ್ ಕುಲಾಲ್ ಹಾಗೂ ದೈವ ನರ್ತಕ ನರಸಿಂಹ ಪರವ ಇವರನ್ನು ಸಹ ಸನ್ಮಾನಿಸಲಾಯಿತು.







