ಕುಂದಾಪುರ, ಬೈಂದೂರಿನಲ್ಲಿ ಹಂದಿಗಳ ಸರಣಿ ಸಾವು ಪ್ರಕರಣ| ಗೊಂದಲಕ್ಕೊಳಗಾಗದೇ ಜಾಗೃತರಾಗಿ: ಜನತೆಗೆ ಅಧಿಕಾರಿಗಳ ಸೂಚನೆ

ಕುಂದಾಪುರ, ಜು.14: ಬೈಂದೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಕಾಡು ಹಂದಿಗಳು ಹಾಗೂ ಸೇನಾಪುರ ಸೇರಿದಂತೆ ಇತರ ಕಡೆಗಳಲ್ಲಿ ಸಾಕು ಹಂದಿಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷಾ ವರದಿ ಈವರೆಗೆ ಬಂದಿಲ್ಲ. ಮೂಲಗಳ ಪ್ರಕಾರ ಆಫ್ರಿಕನ್ ಸ್ವೈನ್ ಫೀವರ್ ಕಾಯಿಲೆಯಿಂದಾಗಿ ಹಂದಿಗಳು ಈ ರೀತಿ ಸರಣಿಯಲ್ಲಿ ಸಾಯುತ್ತಿರಬಹುದು ಎಂಬ ಶಂಕೆಯನ್ನು ಇಲಾಖೆಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈಗಾಗಲೇ 2 ಕಾಡು ಹಂದಿ ಹಾಗೂ 1 ನಾಡ ಹಂದಿಯ ಮರಣೋತ್ತರ ಪರೀಕ್ಷಾ ಮಾದರಿಯನ್ನು ಮಂಗಳೂರು ಹಾಗೂ ಬೆಂಗಳೂರಿನ ಭಾರತೀಯ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ (ಪ್ರಯೋಗಾಲಯ)ಗೆ ಕಳುಹಿಸಲಾ ಗಿದ್ದು ಇದರ ವರದಿ ಇನ್ನಷ್ಟೇ ಬರಬೇಕಿದೆ. ಆ ಬಳಿಕವಷ್ಟೇ ಹಂದಿಗಳ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅವರು ಹೇಳುತ್ತಾರೆ.
ಜನರಲ್ಲಿ ಕಾಣಿಸುವ ಹಂದಿ ಜ್ವರಕ್ಕೂ, ಹಂದಿಗಳಲ್ಲಿ ಕಂಡುಬರುವ ಜ್ವರಕ್ಕೂ ಬಾರೀ ವ್ಯತ್ಯಾಸವಿದೆ. ಜನರಲ್ಲಿ ಈ ಬಗ್ಗೆ ಆತಂಕ, ಗೊಂದಲ ಬೇಡ. ಆದರೆ ಅಗತ್ಯ ಎಚ್ಚರಿಕೆ ಜೊತೆಗೆ ಅಧಿಕಾರಿಗಳ ಜೊತೆಗೆ ಸಂವಹನ, ಮಾಹಿತಿ ವಿನಿಮಯ ಇರಲಿ ಎಂದು ಅವರು ಸಲಹೆ ನೀಡಿದ್ದಾರೆ.
ಏನಿದು ಆಫ್ರಿಕನ್ ಸ್ವೈನ್ ಫೀವರ್?: ಹಂದಿಗಳಿಗೆ ಪ್ರಮುಖವಾಗಿ ಮೂರು ರೀತಿಯ ರೋಗ ಬರುತ್ತವೆ. ಆಫ್ರಿಕನ್ ಸ್ವೈನ್ ಫೀವರ್, ಕ್ಲಾಸಿಕಲ್ ಸ್ವೈನ್ ಫೀವರ್ ಹಾಗೂ ಹೆಮರೇಜಿಕ್ ಸೆಫ್ಟಿ ಸೀಮಿಯಾ (ಗರಳೆ ರೋಗ). ಕ್ಲಾಸಿಕಲ್ ಸ್ವೈನ್ ಫೀವರ್ ಹಾಗೂ ಗರಳೆ ರೋಗಕ್ಕೆ ಚಿಕಿತ್ಸೆ ಹಾಗೂ ಲಸಿಕೆಯೂ ಇದೆ. ಆದರೆ ಆಫ್ರಿಕನ್ ಸ್ವೈನ್ ಫೀವರ್ ಯಾವುದೇ ರೀತಿಯ ಚಿಕಿತ್ಸೆಯಾಗಲೀ, ಲಸಿಕೆಯಾಗಲಿ ಇಲ್ಲ. ಇದು ವೈರಸ್‌ನಿಂದ ಬರುವ ಕಾಯಿಲೆ. ಒಂದೊಂದು ಪ್ರದೇಶದಲ್ಲಿ ಕೆಲವೊಮ್ಮೆ ಹೆಚ್ಚಾಗಿ ಕಂಡುಬರುತ್ತದೆ.
ಈ ರೋಗ ಮೊದಲಿಗೆ ಕಂಡು ಬಂದಿದ್ದು ಆಫ್ರಿಕನ್ ದೇಶಗಳಲ್ಲಿ. ಹೀಗಾಗಿ ಇದಕ್ಕೆ ಆಫ್ರಿಕನ್ ಸ್ಟೈನ್ ಫೀವರ್ ಎಂದು ಹೆಸರಿಡಲಾಯಿತು. ಭಾರತದಲ್ಲಿ ಮೊದಲಿಗೆ ಈಶಾನ್ಯ ರಾಜ್ಯಗಳಾದ ಅಸ್ಸಾಂನಲ್ಲಿ ಕಂಡು ಬಂದಿತ್ತು. ಚೀನದ ಮೂಲಕ ಅದು ಭಾರತವನ್ನು ಪ್ರವೇಶಿಸಿತ್ತು. ಆ ಬಳಿಕ ದೇಶ ವ್ಯಾಪಿ ಹಲವೆಡೆ ಅದು ಕಂಡುಬಂದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳ್ಳೆಯಲ್ಲಿ 4 ವರ್ಷಗಳ ದ ಹಿಂದೆ ಹಂದಿ ಫಾರ್ಮೋಂದರಲ್ಲಿ ಇದು ಕಂಡು ಬಂದಿತ್ತು. ಆ ವೇಳೆ ಅಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಕೈಗೊಂಡು, ರೋಗವನ್ನು ನಿಯಂತ್ರಣಕ್ಕೆ ತರಲಾಗಿತ್ತು.
ರೋಗದ ಲಕ್ಷಣಗಳೇನು?: *ಕಾಡು/ ಸಾಕು ಹಂದಿಗಳಲ್ಲಿ ಮೊದಲಿಗೆ ಜ್ವರ ಬರುತ್ತದೆ. *ಅನಂತರ ನಿಶ್ಯಕ್ತಿ, ಉಸಿರಾ ಟದ ತೊಂದರೆ, ಆಹಾರ ಸೇವನೆ ಮಾಡುವುದಿಲ್ಲ. ಕೆಲವೊಮ್ಮೆ ಬೇಧಿ ಉಂಟಾಗುತ್ತದೆ. * ಈ ಜ್ವರ ಬಂದರೆ ಕೆಲವೇ ಗಂಟೆಗಳಲ್ಲಿ ಹಂದಿಗಳು ಸಾಯುತ್ತವೆ. ಬೆಳಗ್ಗೆ ರೋಗ ಕಾಣಿಸಿಕೊಂಡರೆ, ಸಂಜೆಯೊಳಗೆ ಸಾವನ್ನಪ್ಪುತ್ತವೆ. ಕ್ಷಿಪ್ರಗತಿಯಲ್ಲಿ ಹಂದಿಯಿಂದ ಹಂದಿಗೆ ನೀರು, ಗಾಳಿ, ದೈಹಿಕ ಸಂಪರ್ಕದ ಮೂಲಕ ಹರಡುತ್ತದೆ. ಬೇರೆ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಈ ರೋಗ ಹರಡುವುದಿಲ್ಲ.
ಹೇಗೆ ಬರಬಹುದು?: ಸೀಮಿತ ಅವಧಿಯ ಹವಾಮಾನ ವೈಪರೀತ್ಯ, ಹಂದಿಗಳಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಾದಾಗ, ಕಲುಷಿತ ನೀರಿನ ಸೇವನೆ ಮೊದಲಾದ ಕಾರಣಗಳಿಂದಲೂ ಪೋಗ ಬರುವ ಸಾಧ್ಯತೆಗಳಿದೆ. ಸಾಕು ಹಂದಿಗಳಲ್ಲಿಯೇ ಇದು ಕಂಡುಬಂದಿರುವ ಸಾಧ್ಯತೆ ಇರಬಹುದು. ಆ ಕಾಯಿಲೆಯಿಂದ ಸತ್ತ ಹಂದಿಯನ್ನು ಯಾರಾದರೂ ಕಾಡಿಗೆ ಎಸೆದರೆ ಆ ಮೂಲಕ ಕಾಡಿನ ಹಂದಿಗಳಿಗೂ ಹರಡುವ ಸಾಧ್ಯತೆ ಇರುತ್ತದೆ ಎಂದು ಅಭಿಪ್ರಾಯವನ್ನು ಇಲಾಖಾ ತಜ್ಞರು ವ್ಯಕ್ತಪಡಿಸುತ್ತಾರೆ.
ಪಶ್ಚಿಮ ಘಟ್ಟದಲ್ಲಿರುವ ಹಂದಿಗಳಿಗೆ ಅಪಾಯ?
ಪಶ್ಚಿಮ ಘಟ್ಟ ಪ್ರದೇಶದಲ್ಲಿ 15-20 ಸಾವಿರ ಕಾಡುಹಂದಿಗಳಿರಬಹುದು ಎಂಬ ಅಂದಾಜಿದೆ. ಇತ್ತೀಚೆಗೆ ಕುಂದಾಪುರ, ಬೈಂದೂರು ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಹತ್ತಾರು ಹಂದಿಗಳು ಸಾವನ್ನಪ್ಪಿವೆ. ಒಂದು ವೇಳೆ ಇವು ಆಫ್ರಿಕನ್ ಸ್ವೈನ್ ಫೀವರ್‌ನಿಂದಲೇ ಸಾವನ್ನಪ್ಪಿದ್ದರೆ, ಹಂದಿಗಳಿಂದ ಹಂದಿಗೆ ಹರಡುವ ಕಾಯಿಲೆಯಾದ ಕಾರಣ ಇಡೀ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿರುವ ಕಾಡುಹಂದಿಗಳಿಗೂ ಇದು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.
ನಿಯಂತ್ರಣದ ಕ್ರಮಗಳೇನು?: ಹಂದಿಗಳು ಆಫ್ರಿಕನ್ ಸ್ವೈನ್ ಫೀವರ್ ನಿಂದಲೇ ಸಾಯುತ್ತಿರುವುದು ಖಚಿತ ಗೊಂಡರೆ, ಹಂದಿ ಫಾರ್ಮ್‌ನವರು ಕೂಡ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಚಿಕಿತ್ಸೆ, ಲಸಿಕೆ ಇಲ್ಲದೇ ಇರುವುದರಿಂದ ಕೆಲ ಕ್ರಮ ಅಗತ್ಯವಾಗಿದೆ. ಯಾವುದಾದರೂ ಫಾರ್ಮ್‌ನಲ್ಲಿ ಹಂದಿ ಸತ್ತಿದ್ದರೆ, ಆ ಫಾರ್ಮ್ ನಲ್ಲಿರುವ ಎಲ್ಲ ಹಂದಿಗಳನ್ನು ಕಲ್ಲಿಂಗ್ (ಸಾಯಿಸುವುದು) ಮಾಡಬೇಕಾಗುತ್ತದೆ. ಅದಾದ ನಂತರ 8 ಅಡಿ ಆಳದಲ್ಲಿ ರಾಸಾಯನಿಕ ಹಾಕಿ ಹೂತು ಹಾಕಬೇಕು.
ಇದಲ್ಲದೆ 1 ಕಿ.ಮೀ. ಸುತ್ತಮುತ್ತ ವ್ಯಾಪ್ತಿಯಲ್ಲಿ ಹಂದಿ ಫಾರ್ಮ್ ಅಥವಾ ಸಾಕು ಹಂದಿಗಳಿದ್ದರೂ, ಕಲ್ಲಿಂಗ್ ಮಾಡಿ, ಫಾರ್ಮ್ ಬಂದ್ ಮಾಡ ಬೇಕಾಗುತ್ತದೆ. ಜತೆಗೆ 10 ಕಿ.ಮೀ. ವ್ಯಾಪ್ತಿಯಲ್ಲಿ ಬಫರ್ ಜೋನ್ ಮಾಡಿ ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗುತ್ತದೆ. ಪ್ರತಿ ಫಾರ್ಮ್‌ಗೆ ಇಲಾಖೆ ವೈದ್ಯರು ಭೇಟಿ ನೀಡಿ ಹಂದಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ. ಆರೋಗ್ಯವಂತ ಹಂದಿಯ ಸ್ಯಾಂಪಲ್ ಕೂಡ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗುತ್ತದೆ.
"ನಾವೀಗ ಸ್ಯಾಂಪಲ್‌ಗಳ ವರದಿಯ ನಿರೀಕ್ಷೆಯಲ್ಲಿದ್ದೇವೆ. ಜನರಲ್ಲಿ ಆತಂಕ ಬೇಡ. ಸದ್ಯಕ್ಕೆ ಹಂದಿಗಳು ಯಾವ ಕಾರಣದಿಂದ ಸಾವನ್ನಪ್ಪುತ್ತಿವೆ ಅನ್ನುವುದು ಖಚಿತಗೊಂಡಿಲ್ಲ. ಒಂದೆರಡು ದಿನಗಳಲ್ಲಿ ವರದಿ ಬರಬಹುದು. ಖಚಿತ ಗೊಂಡರೆ ಪಶು ಸಂಗೋಪನಾ ಇಲಾಖೆ ಪ್ರಮುಖರು, ಜಿಲ್ಲಾಡಳಿತ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳು ತ್ತದೆ. ಸಾಕಾಣಿಕೆದಾರರು ಕೂಡ ಫಾರ್ಮ್‌ಗಳಲ್ಲಿ ಬಯೋ ಸೆಕ್ಯೂರಿಟಿ ಕ್ರಮಗಳನ್ನು ಕೈಗೊಳ್ಳಬೇಕು. ಇದು ಮನುಷ್ಯ ರಿಗೆ ಹರಡುವುದಿಲ್ಲ. ಇತರೆ ಪ್ರಾಣಿಗಳಿಗೆ ಹರಡುವುದಿಲ್ಲ. ಈ ಬಗ್ಗೆ ಆತಂಕ ಬೇಡ, ಜಾಗರುಕತೆ ಅಗತ್ಯ. ಕೊಳೆತ ಹಂದಿಗಳ ದೇಹ ನೀರಿಗೆ ಸೇರಿ, ಆ ನೀರಿನಿಂದ ಸಾಂಕ್ರಮಿಕ ರೋಗ ಹರಡುವ ಸಾಧ್ಯತೆಗಳಿರುವ ಕಾರಣ ಎಚ್ಚರಿಕೆ ಇರಲಿ".
-ಡಾ. ಅರುಣ್ ಹೆಗ್ಡೆ, ಸಹಾಯಕ ನಿರ್ದೇಶಕರು ಪಶು ಪಾಲನಾ ಇಲಾಖೆ ಕುಂದಾಪುರ.






