ಶರಾವತಿ, ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಅಪಾಯದ ತೂಗುಗತ್ತಿಗಳು: ಪರಿಸರ ವಿಜ್ಞಾನಿ ನಿರ್ಮಲಾ ಗೌಡ

ಉಡುಪಿ, ಮಾ.25: ಪಶ್ಚಿಮ ಘಟ್ಟ ಪ್ರದೇಶಗಳ ವ್ಯಾಪ್ತಿಯಲ್ಲಿ ಸರಕಾರ ನಿರ್ಮಿಸಲುದ್ದೇಶಿಸಿರುವ ಶರಾವತಿ ಮತ್ತು ವಾರಾಹಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಗಳು ನಿಜವಾಗಿಯೂ ಅಪಾಯದ ತೂಗುಗತ್ತಿಗಳಾಗಿದ್ದು, ಇವುಗಳ ಬಗ್ಗೆ ಸರಕಾರ ಬಹಿರಂಗ ಪಡಿಸಿದ್ದಕ್ಕಿಂತ ಮುಚ್ಚಿರುವುದೇ ಅಧಿಕ. ಈ ಯೋಜನೆಗಳು ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟದ ಪಾಲಿಗಂತೂ ಅತ್ಯಂತ ಅಪಾಯಕಾರಿಯಾದುದು ಎಂದು ಖ್ಯಾತ ಪರಿಸರ ವಿಜ್ಞಾನಿ, ಪರಿಸರಕ್ಕೆ ಸಂಬಂಧಿಸಿದ ‘ಮ್ಯಾಪಿಂಗ್ ಮಲೆನಾಡು’ನ ಸಂಪಾದಕಿ ನಿರ್ಮಲಾ ಗೌಡ ಹೇಳಿದ್ದಾರೆ.
ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನ ಹಾಗೂ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ ಇವುಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇಂದು ನಡೆದ ಪರಿಸರ ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ ಹಾಗೂ ಪರಿಸರ ವ್ಯಾಜ್ಯಗಳ ಕುರಿತು ಮಾತನಾಡಿದರು.
ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳು ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಸೀಮಿತವಾದ ಪ್ರದೇಶ ವಲ್ಲ. ಅದು ಪ್ರಾಕೃತಿಕವಾಗಿ ಇಡೀ ವಿಶ್ವಕ್ಕೆ ಸಂಬಂಧಿಸಿದ ಅಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲಾ ಆದ್ಯ ಕರ್ತವ್ಯವಾಗಿದೆ ಎಂದು ಅವರು ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.
ಉತ್ತರದ ಗುಜರಾತಿನ ತಾಪಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ ಈಗಾಗಲೇ 59ಕ್ಕೂ ಅಧಿಕ ಅಪರೂಪದ ಪ್ರಾಣಿ ಹಾಗೂ ಸಸ್ಯಪ್ರಬೇಧಗಳು ವಿನಾಶದ ಅಂಚಿನಲ್ಲಿವೆ ಎಂದು ಘೋಷಿಸಲಾಗಿದೆ. ಅವುಗಳಲ್ಲಿ ಕಾಳಿಂಗ, ಪೆಂಗೋಲಿನ್, ಹುಲಿ ಮುಂತಾದವು ಪ್ರಮುಖವಾದವು. ಇಡೀ ಜಗತ್ತಿನಲ್ಲಿ ಸಿಂಗಳೀಕ (ಸಿಂಹ ಬಾಲದ ಮಂಗ)ಗಳು ಇನ್ನೂ ಉಳಿದಿರುವುದು ಉತ್ತರ ಕನ್ನಡದ ಶರಾವತಿ ನದಿ ಪಾತ್ರದಲ್ಲಿ ಮಾತ್ರ. ಇವುಗಳೆಲ್ಲವೂ ಪ್ರಪಂಚದಿಂದಲೇ ಅಳಿದುಹೋಗ ದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ತನ್ನದೇ ಕಾನೂನು ಉಲ್ಲಂಘಿಸುತ್ತಿರುವ ಸರಕಾರ: 1972ರಲ್ಲಿ ಜಾರಿಗೆ ಬಂದಿರುವ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 29ನೇ ಕಲಂನಂತೆ ಈ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ, ನಿರ್ಮಾಣ ಕಾಮಗಾರಿ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ನವ್ಯಜೀವಿ ಧಾಮಗಳಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡದ ನಿರ್ಮಾಣ ಮಾಡುವಂತಿಲ್ಲ. ಕೇವಲ ಪ್ರಕೃತಿ, ವನ್ಯಜೀವಿಗಳ ರಕ್ಷಣೆಗೆ ಅಗತ್ಯವಿರುವ ಯೋಜನೆಗಳನ್ನು ಮಾತ್ರ ಇಲ್ಲಿ ಅನುಷ್ಠಾನಗೊಳಿಸಲು ಅವಕಾಶವಿದೆ ಎಂದು ಶರಾವತಿ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿರುವ ನಿರ್ಮಲಾ ಗೌಡ ತಿಳಿಸಿದರು.
ಆದರೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅನುಷ್ಠಾನ ಗೊಳಿಸಲು ಮುಂದಾಗುವ ಮೂಲಕ ಸರಕಾರ ತಾನೇ ರೂಪಿಸಿದ ಕಾನೂನನ್ನು ಉಲ್ಲಂಘಿಸಲು, ಅಥವಾ ಅದರ ಕಣ್ಣಿಗೆ ಮಣ್ಣೆರಚಲು ಮುಂದಾಗಿದೆ. ಕೆಪಿಸಿಎಲ್ ಮೂಲಕ ಹಮ್ಮಿಕೊಳ್ಳಲಾಗುವ ಈ ಯೋಜನೆಯಲ್ಲಿ ತಲಕಳಲೆ ಹಾಗೂ ಗೇರುಸೊಪ್ಪ ಜಲಾಶಯಗಳ ನಡುವೆ ಸುಮಾರು 10,500 ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ 54 ಹೆಕ್ಟೇರ್ ಭೂಪ್ರದೇಶ ಮಾತ್ರ ಬಳಸಿಕೊಳ್ಳಲಾಗುತ್ತದೆ ಎಂದು ಸರಕಾರ ಹೇಳುತ್ತಿದೆ. ಆದರೆ ಯೋಜನೆಯ ವಾಸ್ತವ ಚಿತ್ರಣ ಬೇರೆಯೇ ಇದೆ ಎಂದವರು ವಿವರಿಸಿದರು.
ಯೋಜನೆ ಅನುಷ್ಠಾನಗೊಳ್ಳುವುದು ಉತ್ತರ ಕನ್ನಡದ ಹೊನ್ನಾವರ, ಶಿವಮೊಗ್ಗದ ಸಾಗರ ತಾಲೂಕುಗಳ ವ್ಯಾಪ್ತಿ ಯಲ್ಲಿ ಶರಾವತಿ ನದಿ ಪಾತ್ರದಲ್ಲಿ. 2000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಶತಾಯಗತಾಯ ಜಾರಿಗೊಳಿಸಲು ಸರಕಾರ ಮುಂದಾಗಿದೆ. ಆದರೆ ಯೋಜನೆ ನಿರ್ಮಾಣ ಗೊಳ್ಳುವುದು ಭೂಗರ್ಭದಲ್ಲಿ ಸ್ಥಾಪಿಸುವ ವಿದ್ಯುತ್ ಘಟಕದಿಂದ ಎಂದವರು ವಿವರಿಸಿದರು.
ಭೂಮಿಯ ಒಳಗೆ ಯೋಜನೆಯ ಕಾಂಕ್ರೀಟ್ ಸ್ಥಾವರ ಮೂರು ಫುಟ್‌ಬಾಲ್ ಮೈದಾನದಷ್ಟು ಉದ್ದವಾಗಿ, 18 ಮಾಳಿಗೆ ಕಟ್ಟಡದಷ್ಚು ಎತ್ತರವಾಗಿದೆ ಎಂದು ಸರಕಾರಕ್ಕೆ ಸಲ್ಲಿಸಿರುವ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಸರಕಾರ ಇದರ ವಿವರಗಳನ್ನೆಲ್ಲಾ ಜನರಿಂದ ಮುಚ್ಚಿಟ್ಟಿದೆ. ಇದರ ನಿರ್ಮಾಣಕ್ಕೆ ಸ್ಫೋಟಕಗಳನ್ನು ಬಳಸಲಾಗು ತಿದ್ದು, ಇದರಿಂದ ಪಶ್ಚಿಮ ಘಟ್ಟದ ಮೇಲಾಗುವ ಪರಿಣಾಮಗಳನ್ನು ಊಹಿಸಿಕೊಂಡರೆ ನಮ್ಮ ಭವಿಷ್ಯದ ಬಗ್ಗೆ ನಡುಕ ಹುಟ್ಟುತ್ತದೆ ಎಂದು ನಿರ್ಮಲಾ ಗೌಡ ನುಡಿದರು.
ಇನ್ನು ಈ ಯೋಜನೆಗೆ ಬೇಕಾಗಿರುವ ಟ್ರಾನ್ಸ್‌ಫಾರ್ಮರ್ 20 ಮಾಳಿಗೆ ಕಟ್ಟಡದಷ್ಟು ಎತ್ತರ ಎಂದು ಹೇಳಲಾಗಿದೆ. ಜಗತ್ತಿನ 22 ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟದಲ್ಲಿ ಇಂಥ ಯೋಜನೆಯ ಅಗತ್ಯವಿದೆಯೇ ಎಂದವರು ಪ್ರಶ್ನಿಸಿದರು.
ನೆಲೆ ಕಳೆದುಕೊಳ್ಳುವ ಜನರು: ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಬಳಸುವ ಭಾರೀ ಸ್ಪೋಟಕಗಳನ್ನು ಇಲ್ಲಿ ಬಳಸಲು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದ ಮುಂದೆ ಇಡೀ ಪಶ್ಚಿಮಘಟ್ಟದ ಸಮತೋಲನವೇ ತಪ್ಪಿ ಉದ್ದಕ್ಕೂ ಭೂಕುಸಿತದಂಥ (ಕೇರಳ ವಯನಾಡಿನಲ್ಲಿ ಆದಂತೆ) ಅನಾಹುತಗಳಾಗುವುದು ಖಂಡಿತ ಎಂದರು.
ಇದರೊಂದಿಗೆ ನದಿ ಉಗಮಗಳಲ್ಲಿರುವ ನೀರಿನೊಸರೆಗಳು ಮಾಯವಾಗಿ ನದಿಗಳೇ ಬತ್ತಿಹೋಗಲಿವೆ. ಇಂಗಾಲದ ಡೈಆಕ್ಸೈಡ್‌ನ್ನು ಹಿಡಿದಿಟ್ಟುಕೊಳ್ಳುವ ಮರಗಳ ಸಾಮರ್ಥ್ಯ ಇಲ್ಲವಾಗಿ ಹವಾಮಾನ ವೈಪರಿತ್ಯಕ್ಕೆ ಕಾರಣವಾಗುತ್ತದೆ. ನದಿಗಳನ್ನೇ ಅವಲಂಬಿಸಿರುವ ಜನರು ತಮ್ಮ ನೆಲೆಗಳನ್ನು ಕಳೆದುಕೊಳ್ಳುವ ಸ್ಥಿತಿಗೆ ಬರಬಹುದು ಎಂದರು.
ತಡೆಯಾಜ್ಞೆ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಈಗಾಗಲೇ ಹೂಡಿರುವ ದಾವೆಯಲ್ಲಿ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಂದ್ರ ವನ್ಯಜೀವಿ ಮಂಡಳಿ ಯೋಜನೆಗೆ ಇನ್ನೂ ಅನುಮೋದನೆ ನೀಡಿಲ್ಲ, ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಇದೇ ರೀತಿಯ ಅಥವಾ ಇದಕ್ಕಿಂತಲೂ ಅಧಿಕ ಅಪಾಯ ಪ್ರಸ್ತಾವಿತ ವಾರಾಹಿ ಪಂಪ್ಡ್ ಸ್ಟೋರೇಜ್ ಯೋಜನೆ ಯಲ್ಲಿದೆ. ಇದು ಸಹ ಮೂಕಾಂಬಿಕಾ ಅಭಯಾರಣ್ಯದಲ್ಲಿ ಬರುತ್ತದೆ. ವಿಚಿತ್ರವೆಂದರೆ ಈ ಯೋಜನೆಯಲ್ಲಿ 75 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು 100 ಮೆಗಾವ್ಯಾಟ್‌ನ್ನು ಬಳಸಬೇಕಾಗುತ್ತದೆ ಎಂದು ನಿರ್ಮಲಾ ಗೌಡ ಹೇಳಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದವರಲ್ಲಿ ಒಬ್ಬರಾದ ಫೌಂಡೇಷನ್‌ನ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾವೇ ರೂಪಿಸಿದ ಪರಿಸರ ರಕ್ಷಣಾ ಕಾಯಿದೆಗಳನ್ನು ಅವೈಜ್ಞಾನಿಕ ಯೋಜನೆಗಳ ಮೂಲಕ ಸರಕಾರಿ ಸಂಸ್ಥೆಗಳೇ ಉಲ್ಲಂಘಿಸುತ್ತಿರುವುದು ವಿಪರ್ಯಾಸ ಎಂದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸುರೇಖಾ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಕವಿತಾ ಅತಿಥಿಗಳನ್ನು ಪರಿಚಯಿಸಿದರು.






