ಶಿರೂರು ಪರ್ಯಾಯ ಮಹೋತ್ಸವ: ವೈಭವದ ಶೋಭಯಾತ್ರೆ

ಉಡುಪಿ, ಜ.18: ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿಯ ಪ್ರಥಮ ಪರ್ಯಾಯೋತ್ಸವದ ಶೋಭಾಯಾತ್ರೆಯು ಗುರುವಾರ ಮುಂಜಾನೆ ವೈಭವಪೂರ್ಣವಾಗಿ ಜರಗಿತು.
ನಗರದ ಜೋಡುಕಟ್ಟೆ ಬಳಿಕ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಶೋಭಾಯಾತ್ರೆಗೆ ಚಾಲನೆ ನೀಡಿದರು. ಮೆರವಣಿಗೆಯು ಜೋಡುಕಟ್ಟೆ, ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಮಿತ್ರ ಆಸ್ಪತ್ರೆ ರಸ್ತೆ, ತೆಂಕಪೇಟೆ ಮಾರ್ಗವಾಗಿ ಶ್ರೀಕೃಷ್ಣಮಠದವರೆಗೆ ಸಾಗಿಬಂತು.
ಜಾನಪದ ಡೋಲು, ತಿರುವನಂತಪುರದ ಆನೆ, ತಟ್ಟೀರಾಯ, ಸೋಮ ಕಾಸುರ, ಮರಕಾಲು, ಚಿಲಿಪಿಲಿ ಗೊಂಬೆ, ಕಂಸವಧೆ, ಸೋಮನ ಕುಣಿತ, ಬ್ರೆಜಿಲ್ ಗೊಂಬೆ ಡ್ಯಾನ್ಸ್, ಮಾಯಾವಿ ಅಜಗರ ಸಂಹಾರ, ಬೃಹತ ಕೊಕ್ಕರೆಗಳು, ಪುರಿ ಜಗನ್ನಾಥ, ಪಾಂಡುರಂಗ ವಿಠಲ, ಭಜನಾ ತಂಡ, ವಾದಿರಾಜರು ಮತ್ತು ಮಟ್ಟುಗುಳ್ಳ, ಯಕ್ಷಗಾನ, ಬೇಡರ ವೇಷ - ಗಂಡು ಕಲೆ ಶಿರಶಿ, ಶ್ರೀಕೃಷ್ಣ ಕುಚೇಲ, ಕಂಸಾಳೆ, ವಸುದೇವಕೃಷ್ಣ, ವೀರಗಾಸೆ, ಪಟ ಕುಣಿತ, ನರಸಿಂಹ ಅವತಾರ, ಹುಲಿವೇಷ, ಗೋವರ್ಧನಗಿರಿ, ಪೂಜಾ ಕುಣಿತ, ದೋಲ್ ತಾಶಾ, ಮಹಾಮಾಯ ಪುಣೆ, ವರಾಹ ಅವತಾರ, ಕರಗ ಕೋಲಾಟ, ದಾರಿಕಾಸುರ ಸಂಹಾರ, ಹೋಳಿ ಕುಣಿತ, ವಿಶ್ವರೂಪ ದರ್ಶನ, ನಾಗಸ್ವರ, ಸ್ಯಾಕ್ಸೋಫೋನ್, ನಾಗಸ್ವರ ಸೇರಿದಂತೆ ವಿವಿಧ ಟ್ಯಾಬ್ಲೋಗಳು ಗಮನ ಸೆಳೆದವು.
ಮೆರವಣಿಗೆಯಲ್ಲಿ ಮೊದಲಿಗೆ ಶಿರೂರು ಮಠಾಧೀಶ ಶ್ರೀವೇದವರ್ಧನ ತೀರ್ಥ ಸ್ವಾಮೀಜಿ ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಹೊದರೆ, ನಂತರ ಬಂದ ಕೃಷ್ಣಾಪುರ ಮಠಾಧೀಶರು, ಪಲಿಮಾರು ಮಠಾಧೀಶರು, ಪೇಜಾವರ ಮಠಾಧೀಶರು, ಕಾಣಿಯೂರು ಮಠಾಧೀಶರು, ಸೋದೆ ಮಠಾಧೀಶರು, ಅದಮಾರು ಮಠಾಧೀಶರು, ಪಲಿಮಾರು ಕಿರಿಯ ಯತಿಗಳು ಅಲಂಕೃತ ವಾಹನದಲ್ಲಿರಿಸಲಾದ ಪಲ್ಲಕಿಯಲ್ಲಿ ಕುಳಿತು ಸಾಗಿಬಂದರು. ಈ ಬಾರಿ ಮೆರವಣಿಗೆ ಯಲ್ಲಿ 90 ಸ್ತಬ್ಧ ಚಿತ್ರಗಳು ಇದ್ದವು.
ಮೆರವಣಿಗೆ ಆರಂಭಕ್ಕೆ ಮೊದಲೇ ದಾರಿಯುದ್ದಕ್ಕೂ ಸಹಸ್ರಾರು ಮಂದಿ ಭಕ್ತರು ಕಾದು ಕುಳಿತಿದ್ದರು. ಅಭೂತ ಪೂರ್ವ ಈ ಮೆರವಣಿಗೆಯನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಪರ್ಯಾಯ ಮಹೋತ್ಸವ ಸಮಿತಿಯ ಅಧ್ಯಕ್ಷ ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್, ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು.
ಕಿನ್ನಿಮೂಲ್ಕಿ, ಸರ್ವಿಸ್ ಬಸ್ ನಿಲ್ದಾಣ, ಹಳೆ ಕೆಎಸ್‌ಆರ್‌ಟಿಸಿ ಬಸ್ ತಂಗುದಾಣ, ತ್ರಿವೇಣಿ ಸರ್ಕಲ್, ಗಿರಿಜಾ ಸರ್ಜಿ ಕಲ್ ಬಳಿ, ಪುರಭವನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೆರವಣಿಗೆ ಸಾಗುತ್ತಿದ್ದಂತೆ ಹಾಗೂ ನಗರ ದಿಂದ ಜನ ಖಾಲಿಯಾಗುತ್ತಿ ದ್ದಂತೆ ಉಡುಪಿ ನಗರಸಭೆಯಿಂದ ನಿಯೋಜಿಸಲಾದ ನೂರಾರು ಮಂದಿ ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಶೋಭಾಯಾತ್ರೆಗೆ ಚಾಲನೆ: ಡಿಸಿ ಸ್ಪಷ್ಟನೆ
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಬೃಹತ್ ಭಾಗವ ಧ್ವಜವನ್ನು ಹಿಡಿದು ಶೋಭಾಯಾತ್ರೆಗೆ ಚಾಲನೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಸ್ಪಷ್ಟೀಕರಣ ನೀಡಿದ್ದಾರೆ.
‘ಶಿರೂರು ಪರ್ಯಾಯೋತ್ಸವದ ಅಂಗವಾಗಿ ಶೋಭಾಯಾತ್ರೆ ಕಾರ್ಯ ಕ್ರಮಕ್ಕೆ ಉಡುಪಿ ನಗರಸಭೆಯ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಚಾಲನೆಯನ್ನು ನೀಡಿದ್ದೇನೆ. ಅದೇ ರೀತಿ ನೂತನ ಯತಿಗಳಿಗೆ ಪೌರ ಸನ್ಮಾನ ಹಾಗೂ ಸರ್ವಜ್ಞ ಪೀಠ ಏರಿದ ನಂತರ ನಡೆಯುವ ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಹೊರತು ಯಾವುದೇ ರಾಜಕೀಯ ಪ್ರೇರಿತ ಭಾಗವಹಿಸುವಿಕೆ ಆಗಿರುವುದಿಲ್ಲ ಎಂಬ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರಬಯಸುತ್ತೇನೆ’ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.







