ಶೀರೂರು ಮಠದಿಂದ ಮತ್ತೆ ಹುಲಿವೇಷ ಕುಣಿತಕ್ಕೆ ಪ್ರೋತ್ಸಾಹ

ಉಡುಪಿ, ಸೆ.5: ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಯವರು ಹಾಕಿಕೊಟ್ಟ ಪರಂಪರೆಯಂತೆ ವಿವಿಧ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಲು ಶೀರೂರು ಮಠದ ಈಗಿನ ಯತಿಗಳಾದ ಶ್ರೀವೇದವರ್ಧನ ತೀರ್ಥರು ನಿರ್ಧರಿಸಿದ್ದು, ಸೆ.6 ಮತ್ತು 7ರಂದು ನಡೆಯುವ ಈ ಬಾರಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲೇ ಹುಲಿವೇಷ ಹಾಗೂ ವಿವಿಧ ಜಾನಪದ ವೇಷಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಹ ಶೀರೂರುಶ್ರೀಗಳೇ ಈ ವಿಷಯ ತಿಳಿಸಿದರು. ರಥಬೀದಿಯ ತೆಂಕು ಸುತ್ತಿನಲ್ಲಿ ನಿರ್ಮಿಸಿರುವ ರಥದ ಗುತ್ತಿನ ಅನ್ನವಿಠಲ ವೇದಿಕೆಯಲ್ಲಿ ಸೆ.7ರ ಸಂಜೆ 4ರಿಂದ ರಾತ್ರಿ 8ಗಂಟೆಯವರೆಗೆ ಹುಲಿವೇಷ ಮತ್ತು ವಿವಿಧ ಜಾನಪದ ವೇಷಗಳ ಪ್ರದರ್ಶನ ನಡೆಯಲಿದೆ ಎಂದರು.
ಈ ಬಾರಿ 25ಕ್ಕೂ ಅಧಿಕ ತಂಡಗಳು ಇಲ್ಲಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಇಲ್ಲಿ ಸ್ಪರ್ಧೆ ಇರುವುದಿಲ್ಲ. ಕೇವಲ ಪ್ರದರ್ಶನ ಮಾತ್ರ. ತಂಡಗಳಿಗೆ ನೋಟಿನ ಹಾರ ಹಾಕಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಶ್ರೀಲಕ್ಷ್ಮೀವರ ತೀರ್ಥರ ಪರಂಪರೆ ಮುಂದುವರಿಯಲಿದೆ ಎಂದರು.
ಶ್ರೀಮಠದ ದಿವಾನರಾದ ಡಾ.ಉದಯಕುಮಾರ್ ಸರಳಾಯ ಮಾತನಾಡಿ, ದಿ. ಶ್ರೀಲಕ್ಷ್ಮೀವರ ತೀರ್ಥರು ಯಾವುದೇ ಮಠದ ಪರ್ಯಾಯವಿದ್ದರೂ ಶ್ರೀಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ರಥಬೀದಿಯಲ್ಲಿ ಪ್ರತ್ಯೇಕ ವೇದಿಕೆ ನಿರ್ಮಿಸಿ ವೇಷಧಾರಿ ಗಳನ್ನು ಕುಣಿಸಿ, ಭಕ್ತರನ್ನು ರಂಜಿಸು ತಿದ್ದರು. ಅಲ್ಲದೇ ದೊಡ್ಡ ಮೊತ್ತದ ಬಹುಮಾನ ನೀಡಿ ಪ್ರೋತ್ಸಾಹಿಸುತಿದ್ದರು. ಈ ಪರಂಪರೆಯನ್ನು ಶ್ರೀವೇದವರ್ಧನತೀರ್ಥರು ಮುಂದುವರಿಸಲಿದ್ದಾರೆ ಎಂದರು.
ಈ ಬಾರಿ ಸೆ.7ರ ವಿಟ್ಲಪಿಂಡಿಗೆ ಪರ್ಯಾಯ ಶ್ರೀಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರ ಅನುಗ್ರಹದೊಂದಿಗೆ ವಿವಿಧ ವೇಷಗಳ ಪ್ರದರ್ಶನ ನಡೆಸಲು ನಿರ್ಧರಿಸಲಾಗಿದೆ. ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥರು ಉಪಸ್ಥಿತರಿರುವರು ಎಂದರು.
ವೇದಿಕೆಯಲ್ಲಿ ಪ್ರದರ್ಶನ ನೀಡುವ ತಂಡಗಳಿಗೆ ನೋಟಿನ ಮಾಲೆಯನ್ನು ಹಾಕುವ ಪರಂಪರೆ ಮುಂದುವರಿಯಲಿದೆ. ಈ ಬಾರಿ 3ರಿಂದ 4ಲಕ್ಷ ರೂ. ಗಳನ್ನು ಇದಕ್ಕಾಗಿ ವಿನಿಯೋಗಿಸಲಾಗುವುದು ಎಂದರು.ಶೀರೂರು ಮಠದಲ್ಲಿ ಈ ನೋಟಿನ ಮಾಲೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಡಾ.ಉದಯ ಸರಳಾಯ ತಿಳಿಸಿದರು.







