ಶಿರ್ವ | ದುಂಡಾವರ್ತನೆ ತೋರಿದ ಸರ್ವೇಯರ್ ವಿರುದ್ಧ ಕ್ರಮಕ್ಕೆ ಕೃಷಿಕರಿಂದ ಕಾಪು ಶಾಸಕರಿಗೆ ಮನವಿ

ಶಿರ್ವ, ನ.16: ಶಿರ್ವ ಗ್ರಾಮದ ಬಂಟಕಲ್ಲು ಅರಸೀಕಟ್ಟೆ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ಜಮೀನು ಸರ್ವೇಮಾಡಲು ಬಂದಿದ್ದ ಸರ್ವೇಯರ್ ಮತ್ತು ಆತನ ಸಹಾಯಕ ಯಾವುದೇ ಕಾನೂನು ಪಾಲಿಸದೆ ಪಕ್ಕದ ಜಮೀನುಗಳವರೊಂದಿಗೆ ದುಂಡಾವರ್ತನೆ ನಡೆಸಿದ್ದು, ಈ ಸರ್ವೆಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಕೃಷಿಕ ಸಂಘವು ಕಾಪು ತಹಶೀಲ್ದಾರ್ ಮತ್ತು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಅವರಿ ಮನವಿ ಸಲ್ಲಿಸಿದೆ.
ಜಮೀನು ಅಳತೆಗೆ ಹೊರಡುವ ಮೊದಲು ಸರ್ವೇಯರ್ ಅದರ ನಾಲ್ಕೂ ಪಕ್ಕದ ಜಮೀನುಗಳವರಿಗೆ ಸಾಕಷ್ಟು ಮುಂಚಿತವಾಗಿ ನೋಟೀಸು ನೀಡಬೇಕು. ನಕ್ಷೆ ಪ್ರಕಾರವೇ ಜಮೀನು ಅಳತೆ ಮಾಡಿ ಗುರುತುಗಳಿಗೆ ಗಡಿಕಲ್ಲು ಅಳವಡಿಸಬೇಕು. ಇದಾವುದನ್ನೂ ಪಾಲಿಸದೆ ಏಕಾಏಕಿ ಬಂದಿದ್ದ ಸರ್ವೇಯರ್ ತನ್ನಿಷ್ಟದಂತೆ ಎಲ್ಲಾ ಅಳತೆ, ಗಡಿಗುರುತು ಕಾರ್ಯ ಮುಗಿಸಿಯಾದ ಮೇಲೆ ಪಕ್ಕದ ಜಮೀನಿನವರನ್ನು ಫೋನ್ ಕರೆ ಮಾಡಿ ಕರೆದಿದ್ದರು.
ಮೊದಲೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಿರುವುದಲ್ಲದೆ, ತಪ್ಪಾದ ಅಳತೆ, ಗಡಿ ಗಲ್ಲು ಎಲ್ಲೆಲ್ಲೋ ಅಳವಡಿಸಿ, ಎಲ್ಲಾ ಮುಗಿದ ಮೇಲೆ ಕರೆ ಮಾಡಿರುವುದಕ್ಕೆ ಪಕ್ಕದ ಜಮೀನಿನವರು ಆಕ್ಷೇಪವೆತ್ತಿದರು. ಅಷ್ಟಕ್ಕೇ ಆ ಸರ್ವೇಯರ್ ಮತ್ತು ಸಹಾಯಕ ಇಬ್ಬರೂ ತಾವು ಮಾಡಿದ್ದೇ ಕಾನೂನು, ಹೇಳಿದ್ದೇ ಕಾನೂನು ಎನ್ನುವ ರೀತಿಯ ದುಂಡಾವರ್ತನೆ ತೋರಿದ್ದಾರೆ. ಅಲ್ಲದೆ ಗೂಂಡಾಗಳಂತೆ ಮನಬಂದಂತೆ ಮಾತನಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜನಸಾಮಾನ್ಯರ ಸೇವೆಗೆಂದು ನಿಯುಕ್ತಿಗೊಂಡಿರುವ ನೌಕರರ ಈ ರೀತಿ ಕಾನೂನು ಬಾಹಿರ ವರ್ತನೆ, ದೌರ್ಜನ್ಯ ನಡೆಸಿರುವುದು ಸಮರ್ಥನೀಯವಲ್ಲ. ಇರುವ ಕಾನೂನು ಪಾಲಿಸದ ಇಂಥಹವರು ಸರಕಾರಿ ನೌಕರಿ ಮಾಡಲು ಅನರ್ಹರು. ಮೇಲಾಧಿಕಾರಿಗಳು ತನಿಖೆ ನಡೆಸಿ, ಈ ಸರ್ವೇಯರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕಾಪು ತಹಶೀಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಎಚ್ಚರಿಸಿದ್ದಾರೆ.







