ಶ್ರಾವಣ ಹುಣ್ಣಿಮೆ : ಕಾಪು ತಾಲ್ಲೂಕಿನ ವಿವಿಧೆಡೆ ಸಮುದ್ರ ಪೂಜೆ

ಪಡುಬಿದ್ರಿ: ಶ್ರಾವಣ ಮಾಸದ ಪವಿತ್ರ ಹುಣ್ಣಿಮೆ ಪ್ರಯುಕ್ತ ಕಾಪು ತಾಲ್ಲೂಕಿನ ವಿವಿಧೆಡೆ ಸಮುದ್ರ ಪೂಜೆಯನ್ನು ಭಕ್ತಿ, ಶ್ರದ್ಧೆ ಹಾಗೂ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು.
ಮೀನುಗಾರ ಸಮುದಾಯದ ವತಿಯಿಂದ ಸಮುದ್ರ ದೇವರಿಗೆ ಹಾಲು, ತೆಂಗಿನಕಾಯಿ ಹಾಗೂ ಫಲವಸ್ತುಗಳನ್ನು ಸಮರ್ಪಿಸಿ, ಮೀನುಗಾರರ ಸುಖ-ಶಾಂತಿ, ಸಮೃದ್ಧಿ, ಉತ್ತಮ ಮೀನುಗಾರಿಕಾ ಆದಾಯ ಹಾಗೂ ಯಾವುದೇ ಅವಘಡಗಳು ಸಂಭವಿಸದಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಸಂಪ್ರದಾಯವನ್ನು ಗೌರವದಿಂದ ಆಚರಿಸಿದರು.
ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಮಹಾಸಭಾ ಅಧ್ಯಕ್ಷ ಅಶೋಕ್ ಸಾಲ್ಯಾನ್, ಪಡುಬಿದ್ರಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಲೀಲಾಧರ್ ಸಾಲ್ಯಾನ್, ನಿರ್ದೇಶಕ ಸುಧಾಕರ್ ಸಾಲ್ಯಾನ್, ಮಹಿಳಾ ಸಭಾ ಮಾಜಿ ಅಧ್ಯಕ್ಷೆ ಮಾಲತಿ ಎಲ್. ಸಾಲ್ಯಾನ್, ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ, ಕೋಶಾಧಿಕಾರಿ ಅಶೋಕ್ ಬಂಗೇರ, ಜಂಟಿ ಕಾರ್ಯದರ್ಶಿ ಸತೀಶ್ ಸುವರ್ಣ, ಜಂಟಿ ಕೋಶಾಧಿಕಾರಿ ಸತೀಶ್ ಸಾಲ್ಯಾನ್ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದರು.
ಏಳೂರು ಮೊಗವೀರ ಮಹಾಸಭಾ ವತಿಯಿಂದ ಶುಕ್ರವಾರ ಹೆಜಮಾಡಿ ಅಮವಾಸ್ಯೆಕರಿಯ ಬಳಿ ವಿಪುಲ ಮತ್ಸ್ಯ ಸಂಪತ್ತು ದೊರೆಯಬೇಕು ಹಾಗೂ ಯಾವುದೇ ಅವಘಡಗಳು ಸಂಭವಿಸದಂತೆ ಪ್ರಾರ್ಥಿಸಿ ಸಮುದ್ರ ಪೂಜೆ ನೆರವೇರಿಸಲಾಯಿತು.
ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳ, ಮಟ್ಟಪಟ್ಣ ಶ್ರೀ ಪಾಂಡುರಂಗ ಭಜನಾ ಮಂದಿರ ಹಾಗೂ ಹೆಜಮಾಡಿ ಶ್ರೀ ವೀರಮಾರುತಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಭಜನಾ ಮೆರವಣಿಗೆಯೊಂದಿಗೆ ಅಮವಾಸ್ಯೆಕರಿಯ ಬಳಿ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ ಸಮುದ್ರಕ್ಕೆ ಫಲವಸ್ತು, ತೆಂಗಿನಕಾಯಿ, ಸಿಯಾಳ ಹಾಗೂ ಹೂವುಗಳನ್ನು ಸಮರ್ಪಿಸಿ ಹಾಲೆರೆದು ಪೂಜೆ ನೆರವೇರಿಸಲಾಯಿತು.
ಏಳೂರು ಮೊಗವೀರ ಮಹಾಸಭಾ ಅಧ್ಯಕ್ಷ ದಿವಾಕರ ಹೆಜ್ಮಾಡಿ, ಹಿರಿಯರಾದ ನಾರಾಯಣ ಕೆ. ಮೆಂಡನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್‌ಕುಮಾರ್ ಮಟ್ಟು, ಪ್ರಮುಖರಾದ ಎಚ್. ರವಿ ಕುಂದರ್, ಸುಧಾಕರ ಕರ್ಕೇರ, ರಾಜೇಶ್ ಬಂಗೇರ, ಸದಾಶಿವ ಕೋಟ್ಯಾನ್, ವಿಜಯ ಕೋಟ್ಯಾನ್ ಹಾಗೂ ಹರೀಶ್ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಪು ಪಡುವಿನಲ್ಲಿಯೂ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು. ಸಮುದ್ರಕ್ಕೆ ಹಾಲು ಹಾಗೂ ತೆಂಗಿನಕಾಯಿ ಸಮರ್ಪಿಸಿ ಮೀನುಗಾರರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.






